ಗಂಗಾವತಿ (ಕೊಪ್ಪಳ):ಮುಂದಿನ ಒಂದು ವರ್ಷದೊಳಗೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದಲ್ಲಿ ರಾಮನಮೂರ್ತಿ ಸ್ಥಾಪಿಸಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಅಯೋಧ್ಯೆಯ ರಾಮಜನ್ಮ ಭೂಮಿ ಟ್ರಸ್ಟ್ ಸಮಿತಿಯ ಸದಸ್ಯ ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ವಿಶ್ವೇಶ್ವತೀರ್ಥ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ವರ್ಷದಿಂದ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಮುಂದಿನ ಒಂದು ವರ್ಷದಲ್ಲಿ ಅಂದರೆ ಸಂಕ್ರಮಣದ ಹೊತ್ತಿಗೆ ಪೂರ್ಣಗೊಳ್ಳುವ ವಿಶ್ವಾಸವಿದೆ. ಹೀಗಾಗಿ ಮುಂದಿನ ಸಂಕ್ರಮಣದ ಬಳಿಕ ಮಂದಿರದಲ್ಲಿ ರಾಮನ ಮೂರ್ತಿ ಸ್ಥಾಪಿಸಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು. ಈಗಾಗಲೇ ಭಕ್ತರಿಗೆ ಮಂದಿರದೊಳಗೆ ಪ್ರವೇಶ ಕಲ್ಪಿಸಲಾಗಿದೆ. ನಿತ್ಯ ಸಾವಿರಾರು ಜನ ರಾಮ ಮಂದಿರದ ದರ್ಶನ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಗಂಡಕಿ ನದಿಯಿಂದ ಶಿಲೆ: ರಾಮನ ಪ್ರತಿಮೆಯ ನಿರ್ಮಾಣಕ್ಕೆ ಶಿಲೆಯ ಆಯ್ಕೆ ಈಗಾಗಲೇ ಪೂರ್ಣಗೊಂಡಿದೆ. ವರ್ಷಾಂತ್ಯದೊಳಗೆ ಪ್ರತಿಮೆ ನಿರ್ಮಾಣ ಪೂರ್ಣಗೊಳ್ಳಲಿದ್ದು, ನಿಶ್ಚಿತ ದಿನದಂದೇ ಶಿಲಾ ಪ್ರತಿಷ್ಠಾಪನೆ ಮಾಡಲಾಗುವುದು. ಪ್ರತಿಮೆ ನಿರ್ಮಾಣಕ್ಕೆ ನೇಪಾಳದ ಶಿಲೆಯ ಆಯ್ಕೆ ಪೂರ್ಣಗೊಂಡಿದೆ. ಗಂಡಕಿ ನದಿಯಿಂದ ಶಾಲಿಗ್ರಾಮ ಶಿಲೆ ಆಯ್ಕೆಯಾಗಿದೆ. ಅತ್ಯಂತ ಪವಿತ್ರವಾಗಿದೆ. ಐದರಿಂದ ಐದುವರೆ ಅಡಿ ಎತ್ತರ, ಎರಡರಿಂದ ಎರಡೂವರೆ ಅಡಿ ತಳಪಾಯ ಇರಲಿದೆ. ಇದು ಅತ್ಯಂತ ಪವಿತ್ರವಾದ ಏಕಶಿಲಾ ಮೂರ್ತಿಯಾಗಲಿದೆ ಎಂದು ಸ್ವಾಮೀಜಿ ಹೇಳಿದರು.
ಅಲ್ಲದೇ ಮಂದಿರ ನಿರ್ಮಾಣದ ಕಾರ್ಯದ ಶೇ. 60ರಷ್ಟು ಕಾಮಗಾರಿ ಮುಗಿಯಲಿದೆ. ಮೊದಲ ಹಂತದಲ್ಲಿ ಬುನಾದಿ ಮುಗಿದಿದ್ದು, ಗೋಡೆ ನಿರ್ಮಾಣ, ಸ್ತಂಬಗಳ ನಿರ್ಮಾಣ ನಡೆದಿದೆ. ಸುತ್ತಲೂ ಪಾವಳಿ (ಪಾವಟಿಗೆ) ನಿರ್ಮಾಣ ಕಾರ್ಯ ನಡೆದಿದೆ. ಮೇಲೆ ಆರ್ಸಿಸಿ ಹಾಕುವುದು ಬಾಕಿ ಇದೆ. ವರ್ಷದೊಳಗೆ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಮುಗಿಯಲಿದೆ.
ಅಂಜನಾದ್ರಿ ವಿವಾದದ ಬಗ್ಗೆ:ತಾಲೂಕಿನ ವಿಶ್ವ ವಿಖ್ಯಾತ ಅಂಜನಾದ್ರಿ ದೇಗುಲದ ಬಗ್ಗೆ ಎದ್ದಿರುವ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಯಾವುದೇ ಒಂದು ಕ್ಷೇತ್ರ ಮುನ್ನೆಲೆಗೆ ಬಂದಾಗ ವಿವಾದ ಸಹಜ. ಇವುಗಳ ಬಗ್ಗೆ ಹೆಚ್ಚು ಆದ್ಯತೆ ನೀಡಕೂಡದು. ಹತ್ತು ಜನ ಸೇರಿದಾಗ ಹತ್ತು ಅಭಿಪ್ರಾಯಗಳು ವ್ಯಕ್ತವಾಗುವುದು ಸಹಜ.
ಹೀಗಾಗಿ ವಿವಾದಗಳಿಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿಲ್ಲ ಎಂದು ಸ್ವಾಮೀಜಿ, ಅಂಜನಾದ್ರಿ ದೇಗುಲ ಅಭಿವೃದ್ಧಿಯ ಬಗ್ಗೆ ಅಲ್ಲಿನ ಟ್ರಸ್ಟ್ ಹೇಗೆ ರಚನೆಯಾಗಿದೆ, ಉದ್ದೇಶ ಏನೆಂಬುವುದು ತಮಗೆ ಗೊತ್ತಿಲ್ಲ. ಆದರೆ ಉತ್ತಮ ರೀತಿಯಲ್ಲಿ ಅಭಿವೃದ್ಧಿಯಾಗಬೇಕು. ದೇಗುಲಗಳ ಅಭಿವೃದ್ಧಿಗೆ ಮೊದಲು ಟ್ರಸ್ಟ್ ರಚನೆಯಾಗಿ ಅಸ್ತಿತ್ವಕ್ಕೆ ಬರಬೇಕು. ಅದರಲ್ಲಿ ಸ್ಥಳೀಯ ಹಾಗೂ ದೇಶದ ಧಾರ್ಮಿಕ ಮುಖಂಡರನ್ನು ಅದರೊಳಗೆ ಸೇರಿಸಿಕೊಂಡು ಸೂಕ್ತ ಅಭಿಪ್ರಾಯದ ಮೇರೆಗೆ ಅಭಿವೃದ್ಧಿ ಕೈಗೊಂಡರೆ ಅಯೋಧ್ಯೆಯ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ಧಿಯಾಗಬಹುದು ಎಂದು ಶ್ರೀಗಳು ಹೇಳಿದರು.
ಸಭಾಭವನಕ್ಕೆ ಭೂಮಿ ಪೂಜೆ:ಇದಕ್ಕೂ ಮೊದಲು ಪೇಜಾವರ ಶ್ರೀಗಳು, ಇಲ್ಲಿನ ಜಯನಗರದ ಸತ್ಯನಾರಾಯಣ ಪೇಟೆಯ ವಿಜಯಧ್ವಜ ಸಂಸ್ಕೃತ ವಿದ್ಯಾಪೀಠದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಶ್ವೇಶತೀರ್ಥರ ಸಭಾಭವನ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿದರು. ಪೇಜಾವರ ಶ್ರೀಗಳಿಗೆ ಗಂಗಾವತಿ ಅತ್ಯಂತ ಪ್ರಿಯವಾಗಿರುವ ಸ್ಥಳ. ಹೀಗಾಗಿ ಗುರುಗಳ ಸ್ಮರಣಾರ್ಥ ಇಲ್ಲೊಂದು ಸಭಾಭವನ ನಿರ್ಮಾಣದ ಆಶಯ ಹೊಂದಿದ್ದು, ಸುಮಾರು ಐವತ್ತು ಲಕ್ಷ ರೂಪಾಯಿ ಮೊತ್ತದಲ್ಲಿ ಸಭಾಭವನ ನಿರ್ಮಾಣವಾಗಲಿದೆ ಎಂದರು. ಈ ಸಂದರ್ಭದಲ್ಲಿ ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿ ಇದ್ದರು.
ಪೇಜಾವರ ಶ್ರೀಗಳಿಗೆ ಗಂಗಾವತಿ ಅತ್ಯಂತ ಪ್ರಿಯವಾಗಿರುವ ಸ್ಥಳ. ಹೀಗಾಗಿ ಗುರುಗಳ ಸ್ಮರಣಾರ್ಥ ಇಲ್ಲೊಂದು ಸಭಾಭವನ ನಿರ್ಮಾಣದ ಆಶಯ ಹೊಂದಿದ್ದು, ಸುಮಾರು ಐವತ್ತು ಲಕ್ಷ ರೂಪಾಯಿ ಮೊತ್ತದಲ್ಲಿ ಸಭಾಭವನ ನಿರ್ಮಾಣವಾಗಲಿದೆ ಎಂದರು. ಈ ಸಂದರ್ಭದಲ್ಲಿ ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿ ಇದ್ದರು.
ಓದಿ :ಶಿಥಿಲಾವಸ್ಥೆಯ ಪಾರಂಪರಿಕ ಕಟ್ಟಡಗಳ ಪುನಶ್ಚೇತನಕ್ಕೆ ಬಜೆಟ್ನಲ್ಲಿ ಸಾವಿರ ಕೋಟಿ ಬೇಕು: ಪಾರಂಪರಿಕ ತಜ್ಞ ಪ್ರೊ ರಂಗರಾಜ್