ಗಂಗಾವತಿ: ಲಾಕ್ಡೌನ್ ಆರಂಭವಾದಾಗಿನಿಂದ ಎಲ್ಲರಿಗೂ ಒಂದಲ್ಲಾ ಒಂದು ತೊಂದರೆಗಳು ಎದುರಾಗಿವೆ. ಅಂತೆಯೇ ಆಟೋ ವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದವರ ಪಾಡು ಈಗ ತುಂಬಾ ಕಷ್ಟಕರವಾಗಿದೆ.
ಅತ್ತ ಆಟೋ ಸಂಚಾರ ಕೂಡ ಇಲ್ಲ, ಇತ್ತ ನೆರವಿನ ಹಸ್ತ ಚಾಚಲೂ ದಾನಿಗಳೂ ಮುಂದೆ ಬರುತ್ತಿಲ್ಲ. ಇದರಿಂದ ಸಂಸಾರ ಸಾಗಿಸಲು ಕಷ್ಟವಾಗುತ್ತಿದೆ ಎಂದು ನಗರದ ಕೆಲ ಆಟೋ ಚಾಲಕರು ತಮ್ಮ ನೋವು ತೋಡಿಕೊಂಡಿದ್ದಾರೆ.
ಈ ಹಿಂದೆ ದಿನಕ್ಕೆ 15ರಿಂದ 20 ಸಾವಿರ ಪ್ರಯಾಣಿಕರು ನಗರದಲ್ಲಿ ಹಾಗೂ ನಗರದಿಂದ ಹೊರಗಡೆ ನಿತ್ಯ ಓಡಾಡುತ್ತಿದ್ದರು. ಈ ಪ್ರಯಾಣಿಕರ ಮೇಲೆಯೇ ಆಟೋಗಳು ಮತ್ತು ಚಾಲಕರು ಅವಲಂಬಿತರಾಗಿದ್ದರು. ದಿನಕ್ಕೆ ಐದು ನೂರುಗಳಿಂದ ಏಳುನೂರು ರೂ. ಸಂಪಾದನೆಯಾಗಿ ಹೇಗೋ ಜೀವನ ನಡೆಸಿಕೊಂಡು ಹೋಗುತ್ತಿದ್ದರು. ಆದರೆ, ಈಗ ಜೇಬಿನಲ್ಲಿ ಹಣ ಇಲ್ಲದೆ ದಿನಸಿ ಪದಾರ್ಥ ತರುವುದಕ್ಕು ಕಷ್ಟ ಪಡುತ್ತಿದ್ದಾರೆ.
ದಾನಿಗಳು ಬಡ ಆಟೋ ಚಾಲಕರನ್ನು ಗುರುತಿಸಿ, ಆಹಾರದ ಸಾಮಗ್ರಿ ಕಿಟ್ ನೀಡಬೇಕು. ಅಲ್ಲದೆ, ಸರ್ಕಾರ ಕೂಡ ಗಮನಹರಿಸಿ ನಮ್ಮ ಕಷ್ಟಕ್ಕೆ ಭಾಗಿಯಾಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.