ಗಂಗಾವತಿ (ಕೊಪ್ಪಳ):ಆರ್ಥಿಕವಾಗಿರುವ ಸ್ಥಿತಿವಂತರನ್ನು ಹನಿಟ್ರ್ಯಾಪ್ಗೆ ಕೆಡವಲು ಸಂಚು ರೂಪಿಸಿದ ಯುವಕರ ತಂಡವೊಂದು ಇದಕ್ಕಾಗಿ ಮಂಗಳಮುಖಿಯರನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಮಂಗಳಮುಖಿಯರು ಒಪ್ಪದ ಹಿನ್ನೆಲೆ ಅವರ ಮೇಲೆ ಯುವಕರ ತಂಡ ಹಲ್ಲೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.
ಯುವಕರ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವವರನ್ನು ಗಾಂಧಿ ವೃತ್ತದ ನಿವಾಸಿಗಳಾದ ಅನುಶ್ರೀ, ರತ್ನಾ ಅಲಿಯಾಸ್ ರತಿ ಮತ್ತು ಸುಕನ್ಯಾ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಸ್ಪತ್ರೆ ವೈದ್ಯ ವಾದಿರಾಜ್, ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಗಂಭೀರ ಸ್ವರೂಪದ ಏಟುಗಳಾಗಿವೆ ಎಂದು ತಿಳಿಸಿದ್ದಾರೆ.
ಘಟನೆಯ ವಿವರ:ಇಲ್ಲಿನ ಅಮರ ಭಗತ್ ಸಿಂಗ್ ನಗರದ ಯುವಕನೊಬ್ಬನ ನೇತೃತ್ವದ ತಂಡವು ಶ್ರೀಮಂತ ವ್ಯಕ್ತಿಗಳನ್ನು ಹನಿಟ್ರ್ಯಾಪ್ಗೆ ಬೀಳಿಸಲು ತಂತ್ರ ರೂಪಿಸಿದೆ. ಈ ತಂತ್ರದ ಭಾಗವಾಗಿ ಮಂಗಳಮುಖಿಯರನ್ನು ಬಳಸಿಕೊಂಡು ಯೋಜನೆ ಕಾರ್ಯಗತ ಮಾಡುವುದು ಯುವಕರ ಉದ್ದೇಶ ಎಂದು ಮಂಗಳಮುಖಿಯರು ಆರೋಪಿಸಿದ್ದಾರೆ.
ಲೈಂಗಿಕ ಆಸಕ್ತಿ ತೋರುವ ಹಣಕಾಸು ಸ್ಥಿತಿವಂತರನ್ನು ನಾವೇ ನಿಮ್ಮ ಬಳಿಗೆ ಕಳಿಸುತ್ತೇವೆ. ಅವರನ್ನು ಲೈಂಗಿಕ ಆಸೆ ತೋರಿಸಿ ನಮ್ಮಲ್ಲಿಗೆ ಕರೆತರಬೇಕು. ಆಗ ನಾವು ಅವರಿಂದ ಹಣ ವಸೂಲಿ ಮಾಡುತ್ತೇವೆ. ಮರ್ಯಾದೆಗೆ ಅಂಜಿ ಅವರು ಹಣ ನೀಡುತ್ತಾರೆ ಎಂದು ಯುವಕರು, ಮಂಗಳಮುಖಿಯರಿಗೆ ತಿಳಿಸಿದ್ದರಂತೆ. ಇದಕ್ಕೆ ಒಪ್ಪದ ಮಂಗಳಮುಖಿಯರಿಗೆ ರಾತ್ರಿ ವಿದ್ಯಾನಗರದಿಂದ ಜುಲೈನಗರಕ್ಕೆ ಆಟೋದಲ್ಲಿ ಬರುವ ಸಂದರ್ಭದಲ್ಲಿ ರಾಣಾ ಪ್ರತಾಪ್ ಸಿಂಗ್ ವೃತ್ತದಲ್ಲಿ ಯುವಕರ ತಂಡ ಹಲ್ಲೆ ಮಾಡಿದೆ ಎಂದು ಸಂತ್ರಸ್ತರು ನೋವು ತೋಡಿಕೊಂಡಿದ್ದಾರೆ.