ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ನಿಂದ ತುಷ್ಟೀಕರಣ, ಬಿಜೆಪಿಯಿಂದ ಸಶಕ್ತೀಕರಣ: ಕೊಪ್ಪಳದಲ್ಲಿ ಯೋಗಿ - ಉತ್ತರ ಪ್ರದೇಶದಲ್ಲಿ ನಿರಂತರ ಗಲಭೆ

ನಮ್ಮ ಡಬಲ್ ಇಂಜಿನ್ ಸರ್ಕಾರದಿಂದ ಸಶಕ್ತೀಕರಣ ಅಭಿಯಾನ ನಡೆದಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಹೇಳಿದ್ದಾರೆ.

ಯುಪಿ ಸಿಎಂ ಯೋಗಿ ಆದಿತ್ಯನಾಥ್​
ಯುಪಿ ಸಿಎಂ ಯೋಗಿ ಆದಿತ್ಯನಾಥ್​

By

Published : Apr 30, 2023, 7:42 PM IST

ಯುಪಿ ಸಿಎಂ ಯೋಗಿ ಆದಿತ್ಯನಾಥ್​

ಗಂಗಾವತಿ (ಕೊಪ್ಪಳ): ಈ ದೇಶವನ್ನು ಸುಮಾರು ಐವತ್ತು ವರ್ಷಕ್ಕೂ ಹೆಚ್ಚು ಕಾಲ ಆಳಿದ ಕಾಂಗ್ರೆಸ್ ಕೇವಲ ತುಷ್ಟೀಕರಣಕ್ಕೆ ಮುಂದಾಗಿತ್ತು. ಪರಿಣಾಮ ದೇಶ ಅಭಿವೃದ್ಧಿಯ ದಿಶೆ ಕಾಣಲಿಲ್ಲ. ಕಾಂಗ್ರೆಸ್​ನದ್ದು ತುಷ್ಟೀಕರಣವಾದರೆ ಬಿಜೆಪಿಯದ್ದು ಸಶಕ್ತೀಕರಣ. ಇದೇ ಫಲವಾಗಿ ಭಾರತ ಇಂದು ವಿಶ್ವದಲ್ಲಿ ಪ್ರಕಾಶಿಸುತ್ತಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ತಿಳಿಸಿದರು.

ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿಂದು (ಭಾನುವಾರ) ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡ ಅವರು, ತಮ್ಮ ಭಾಷಣವನ್ನು ಕನ್ನಡದಲ್ಲಿಯೇ ಆರಂಭಿಸಿದರು. ರಾಮ ಭಕ್ತ ಹನುಮಾನ್ ಹುಟ್ಟಿದ ನಾಡು ಅಂಜನಾದ್ರಿ ನೆಲೆಬೀಡು, ಗಂಗಾವತಿಯ ಜನತೆಗೆ ನನ್ನ ನಮಸ್ಕಾರಗಳು ಎನ್ನುತ್ತಿದ್ದಂತೆ ಸಭೆಯಲ್ಲಿ ಕರತಾಡನ ವ್ಯಕ್ತವಾಯಿತು.

ರಾಮ ಭಕ್ತ ಹನುಮನ​ ಪುಣ್ಯದ ನೆಲೆಬೀಡಿನ ಜನತೆಗೆ ಕೋಟಿ ಕೋಟಿ ನಮನಗಳು. ಸಹೋದರರೇ ನಾನು ಅಯೋಧ್ಯೆಯ ರಾಮನ ಪುಣ್ಯ ಕ್ಷೇತ್ರದಿಂದ ಹನುಮನ ಪುಣ್ಯ ಕ್ಷೇತ್ರಕ್ಕೆ ಬಂದಿದ್ದೇನೆ. ಈ ಪುಣ್ಯ ಭೂಮಿಯಲ್ಲಿ ರಾಮನಿಗೆ ಹನುಮಂತನ​ ಭೇಟಿಯಾಯಿತು ಎಂದು ಯೋಗಿ ತಮ್ಮ ಮಾತನ್ನು ಪೌರಾಣಿಕದತ್ತ ಹೊರಳಿಸಿದರು.

ನಮ್ಮ ಡಬಲ್ ಇಂಜಿನ್ ಸರ್ಕಾರದಿಂದ ಸಶಕ್ತೀಕರಣ ಅಭಿಯಾನ ನಡೆದಿದೆ. ಯುವ ಕಲ್ಯಾಣ, ಕೃಷಿ ಕಲ್ಯಾಣ, ಗ್ರಾಮೀಣ ಕಲ್ಯಾಣ, ನಗರ ಕಲ್ಯಾಣವಾಗುತ್ತಿದೆ. ಕಾಂಗ್ರೆಸ್ ಪಕ್ಷವು ಪೇಡ್ ಇಂಜಿನ್​ ಇದ್ದಂತೆ. ಅದನ್ನು ಕೈ ಬಿಟ್ಟು ಡಬಲ್ ಇಂಜಿನ್​ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.

ಮೋದಿ, ಏಕ್ ಭಾರತ್ ಶ್ರೇಷ್ಠ ಭಾರತ ಎಂದಿದ್ದಾರೆ. ಜಗತ್ತಿನಲ್ಲಿ ಭಾರತಕ್ಕೆ ದೊಡ್ಡ ಶಕ್ತಿ ಬಂದಿದೆ. ಮನ್ ಕೀ ಬಾತ್​ನಲ್ಲಿ ಯೂನೆಸ್ಕೋ ಪ್ರತಿನಿಧಿ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಅಂತಹ ಶಕ್ತಿ ಮೋದಿಯ ದಕ್ಷ ಆಡಳಿತದಿಂದ ಬಂದಿದೆ. ಇಂದು ಭಾರತದ ತಾಕತ್ತು ಜಗತ್ತಿಗೆ ಗೊತ್ತಾಗಿದೆ. ಜಗತ್ತು ಭಾರತದತ್ತ ನೋಡುತ್ತಿದೆ ಎಂದು ಯೋಗಿ ಪ್ರಶಂಸೆ ವ್ಯಕ್ತಪಡಿಸಿದರು.

ಮೋದಿ ಸರ್ಕಾರ ಕರ್ನಾಟಕದಲ್ಲಿ ಐಟಿ ಕೌಶಲ್ಯ ಅಭಿವೃದ್ಧಿಪಡಿಸುತ್ತಿದ್ದರೆ, ಬೆಂಗಳೂರನ್ನು ಜಗತ್ತಿನಲ್ಲಿ ಐಟಿ ಹಬ್ ಮಾಡುತ್ತಿದ್ದಾರೆ. ಬೆಂಗಳೂರಿನ ಯುವಕರಲ್ಲಿ ಐಟಿ ಕೌಶಲ್ಯ ಹೆಚ್ಚಿದೆ. ಕರ್ನಾಟಕ ವಿಕಾಸವಾದರೆ ಭಾರತ ವಿಕಾಸ ಆಗುತ್ತದೆ. ಪುರಾತನ ತಕ್ಷಶಿಲಾ, ನಳಂದಾದಂತೆ ಬೆಂಗಳೂರು ಐಟಿ ಕೌಶಲ್ಯ ಬೆಳಗುತ್ತಿದೆ. ಅಲ್ಲಿನ ಯುವ ಸಮೂಹಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ ಯೋಗಿ, ಡಬಲ್ ಎಂಜಿನ್ ಸರ್ಕಾರ ಭಾರತದ ಪ್ರಗತಿಗೆ ಯೋಜನೆ ರೂಪಿಸುತ್ತಿದೆ. ಆದರೆ ಕಾಂಗ್ರೆಸ್-ಜೆಡಿಎಸ್ ತುಷ್ಟೀಕರಣ ಮಾಡುತ್ತಿದೆ. ಇದು ಕರ್ನಾಟಕವನ್ನು ಸಂಕಷ್ಟಕ್ಕೀಡು ಮಾಡಿದೆ ಎಂದರು.

ಕೊರೊನಾದಂತಹ ಸಂದರ್ಭದಲ್ಲಿ ಮೋದಿ ಇಡೀ ವಿಶ್ವವೇ ಮೆಚ್ಚುವ ಕಾರ್ಯ ಮಾಡಿದರು. ದೇಶದ 80 ಕೋಟಿ ಜನರಿಗೆ ಉಚಿತ ಚಿಕಿತ್ಸೆ, ಉಚಿತ ಔಷಧಿ, ಉಚಿತ ಪಡಿತರ ನೀಡಿ ಭಾರತವನ್ನು ಮೂರು ವರ್ಷ ಕಾಪಾಡಿದರು ಎಂದರು.

ಉತ್ತರ ಪ್ರದೇಶದಲ್ಲಿ ಈ ಹಿಂದೆ ಎರಡ್ಮೂರು ದಿನಕ್ಕೊಮ್ಮೆ ಗಲಭೆಗಳಾಗುತ್ತಿದ್ದವು. ಕಳೆದ 8 ವರ್ಷದಿಂದ ರಾಜ್ಯ ಶಾಂತಿಯುತವಾಗಿದೆ. ರೈತರು ಸುಖ ಸಮೃದ್ಧಿಯಿಂದ ಇದ್ದಾರೆ. ಯುಪಿ ಜನ ಉತ್ಸಾಹದಿಂದ ಇದ್ದಾರೆ. ಇದೆಲ್ಲ ಮೋದಿ ಮಾರ್ಗದರ್ಶನದ ಡಬಲ್ ಇಂಜಿನ್ ಸರ್ಕಾರದಿಂದ ಸಾಧ್ಯವಾಗಿದೆ. ರೈಲ್ವೇ, ಏರ್​ಪೋರ್ಟ್​, ಸುಂದರ ನಗರ ಸ್ವಚ್ಛ ನಗರ, ಐಐಟಿ, ಏಮ್ಸ್ ನಮ್ಮ ಕೆಲಸ. ಇಂದು ಯುಪಿಯಲ್ಲಿ ಏನಾಗಿದೆ ಎಂದರೆ ಜನ ನಮ್ಮ ಮೇಲೆ ವಿಶ್ವಾಸವಿಡುತ್ತಿದ್ದಾರೆ. ನಾವು ಜಾತಿ-ಧರ್ಮದ ವಿಚಾರಕ್ಕೆ ಕೈಹಾಕಿಲ್ಲ. ಸರ್ವರಿಗೂ ಸಮಾನ ಅವಕಾಶ ನೀಡಿದ್ದೇವೆ. ಇದು ಡಬಲ್ ಇಂಜಿನ್​ ಸರ್ಕಾರದ ಸಾಧನೆ ಎಂದು ಹೇಳಿದರು.

ಇದನ್ನೂ ಓದಿ :ಕರ್ನಾಟಕ, ಉತ್ತರ ಪ್ರದೇಶದ ಸಂಬಂಧ ರಾಮ-ಹನುಮನ ಸಂಬಂಧ ಇದ್ದಂತೆ: ಯೋಗಿ ಅದಿತ್ಯನಾಥ

ABOUT THE AUTHOR

...view details