ಕೊಪ್ಪಳ: ನಗರದ ರೈಲ್ವೆ ನಿಲ್ದಾಣಕ್ಕೆ ಗವಿಸಿದ್ದೇಶ್ವರರ ಹೆಸರು ನಾಮಕರಣ ಮಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಭಿಪ್ರಾಯದ ಅಭಿಯಾನ ಕೈಬಿಡುವಂತೆ ಕೊಪ್ಪಳದ ಗವಿಮಠ ಮನವಿ ಮಾಡಿದೆ.
ರೈಲು ನಿಲ್ದಾಣಕ್ಕೆ ಗವಿಸಿದ್ದೇಶ್ವರರ ಹೆಸರಿಡಲು ಒತ್ತಾಯ: ಅಭಿಯಾನ ಕೈಬಿಡಲು ಶ್ರೀಮಠ ಮನವಿ - Koppal Railway Station
ಕೊಪ್ಪಳದ ರೈಲ್ವೆ ನಿಲ್ದಾಣಕ್ಕೆ ಗವಿಸಿದ್ದೇಶ್ವರರ ಹೆಸರು ನಾಮಕರಣ ಮಾಡಬೇಕು ಎಂಬ ಕೂಗು ಭಕ್ತರಿಂದ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಶ್ರೀಗವಿಮಠ ಅಭಿಯಾನ ಕೈಬಿಡುವಂತೆ ಮನವಿ ಮಾಡಿದೆ.

ಈ ಕುರಿತಂತೆ ಪ್ರಕಟಣೆ ನೀಡಿರುವ ಮಠವು, ಸಾಮಾಜಿಕ ಜಾಲತಾಣಗಳಲ್ಲಿ ರೈಲ್ವೆ ನಿಲ್ದಾಣಕ್ಕೆ ಗವಿಸಿದ್ದೇಶ್ವರ ರೇಲ್ವೆ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಕೆಲವರು ಅಭಿಪ್ರಾಯವನ್ನು ಆಂದೋಲನ ನಡೆಸಿದ್ದಾರೆ. ಮಠದ ಪೂಜ್ಯರೆಲ್ಲರ ಬದುಕು ಭಕ್ತರ ಏಳಿಗೆ ಹಾಗೂ ಸಮಾಜ ಸೇವೆಗೆ ಮೀಸಲಿಡಲಾಗಿದೆ.
ಭಕ್ತರು ಇದನ್ನು ಗಮನದಲ್ಲಿಟ್ಟುಕೊಂಡು ಶ್ರೀಮಠಕ್ಕೆ ಸಂಬಂಧಿಸಿದ ಯಾವುದೇ ಆಂದೋಲನಗಳನ್ನು ಪೂಜ್ಯರ ಅಪ್ಪಣೆ ಇಲ್ಲದೆ ಮಾಡಬಾರದು. ಭಕ್ತರು ಇಟ್ಟಿರುವ ಅಭಿಮಾನಕ್ಕೆ ಧನ್ಯವಾದಗಳು. ಹೆಸರಿಗಾಗಿ ಯಾವುದೇ ಆಂದೋಲನ ನಡೆಸದೆ ಸಮಾಜದಲ್ಲಿ ನೂರಾರು ಕಾರ್ಯಗಳಿದ್ದು ಅವುಗಳಿಗೆ ಆಂದೋಲನದ ಮೂಲಕ ಸಮೃದ್ಧ ಸಮಾಜ ನಿರ್ಮಾಣವಾಗಲಿ ಎಂದು ಶ್ರೀಮಠ ಭಕ್ತರಿಗೆ ಮನವಿ ಮಾಡಿದೆ.