ಕೊಪ್ಪಳ:ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಆಗಸ್ಟ್ 11ರಂದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಈ ಘಟನೆಯಲ್ಲಿ ಯಂಕಪ್ಪ (60 ವರ್ಷ), ಮತ್ತು ಬಾಷಾವಲಿ (22 ವರ್ಷ) ಸಾವೀಗೀಡಾಗಿದ್ದರು. ಅಂದು ನಡೆದ ಘಟನೆಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿರುವ ಬಾಷಾವಲಿ ಮೃತದೇಹ ಗ್ರಾಮದ ನಡುರಸ್ತೆಯಲ್ಲಿ ಬಿದ್ದಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ.
ಹುಲಿಹೈದರ್ ಗ್ರಾಮ ಪಂಚಾಯತ್ ಮುಂಭಾಗದಲ್ಲೇ ಮಾರಾಮಾರಿ ಜರುಗಿದ್ದು, ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಬಾಷಾವಲಿ ಮೃತದೇಹದ ಪಕ್ಕವೇ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಯಂಕಪ್ಪನನ್ನು ಪೊಲೀಸ್ ವಾಹನದಲ್ಲಿಯೇ ಆಸ್ಪತ್ರೆಗೆ ಕಳುಹಿಸಿರುವ ದೃಶ್ಯ ಸೆರೆಯಾಗಿದೆ. ಪೊಲೀಸರ ಎದುರೆ ಜನರು ದೊಣ್ಣೆ ಹಿಡಿದು ಗಲಾಟೆಗೆ ಮುಂದಾಗಿದ್ದಾರೆ. ಪೊಲೀಸರನ್ನೇ ಸುಮ್ಮನಿರಿ ಎನ್ನುವ ಮಾತುಗಳು ಈ ವಿಡಿಯೋದಲ್ಲಿ ಕೇಳಿ ಬಂದಿದೆ.
ಹುಲಿಹೈದರ್ ಮಾರಾಮಾರಿಯ ಮತ್ತೊಂದು ವಿಡಿಯೋ ವೈರಲ್ ಕೈಯಲ್ಲಿ ಕೋಲು ಬ್ಯಾಟ್ ಕಬ್ಬಿಣದ ರಾಡು ಹಿಡಿದು ನಿಂತ ಗುಂಪು. ಮಹಿಳೆಯರು ಕೋಲು ಹಿಡಿದುಕೊಂಡು ನಿಂತಿರುವ ದೃಶ್ಯಗಳು ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿವೆ.
ಗ್ರಾಮಕ್ಕೆ ರಾಜಕೀಯ ಮುಖಂಡರ ಭೇಟಿ:ಗುಂಪು ಘರ್ಷಣೆಯಲ್ಲಿ ಸಾವಿಗೀಡಾದ ಇಬ್ಬರು ಮತ್ತು ಗಾಯಗೊಂಡ ಹಲವರ ಮನೆಗಳಿಗೆ ಸಂಸದ ಕರಡಿ ಸಂಗಣ್ಣ ಮತ್ತು ಶಾಸಕ ಬಸವರಾಜ ದಢೇಸ್ಗೂರು ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಮೃತಪಟ್ಟಿದ್ದ ಯಂಕಪ್ಪ ತಳವಾರ ಮತ್ತು ಪಾಷಾವಲಿ ನಿವಾಸಕ್ಕೆ ಭೇಟಿ ನೀಡಿದ ಸಂಸದ ಮತ್ತು ಶಾಸಕರು ಮೃತರ ಕುಟುಂಬ ಸದಸ್ಯರ ಜೊತೆ ಚರ್ಚಿಸಿದರು. ನಂತರ ಕೋಮು ಘರ್ಷಣೆಯಿಂದ ಗ್ರಾಮದಲ್ಲಿ ನಡೆದ ಘಟನೆ ಮತ್ತು ಸಾವನ್ನಪ್ಪಿದವರನ್ನು ನೆನೆದು ಕಣ್ಣೀರಾದರು.
ಘಟನೆ ನಡೆದು ವಾರ ಕಳೆಯುತ್ತಾ ಬಂದರೂ ಭಯದ ವಾತಾವರಣ ಇನ್ನೂ ಕಡಿಮೆಯಾಗಿಲ್ಲ. ಮಕ್ಕಳು- ಮಹಿಳೆಯರು ಹೊರಕ್ಕೆ ಬರಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಜನ ಅಳಲು ತೋಡಿಕೊಂಡರು. ನಾಳೆಯಿಂದ ಗ್ರಾಮದಲ್ಲಿ ಹಣ್ಣು, ತರಕಾರಿ, ಹಾಲು, ಆಹಾರದ ಕಿಟ್ ಸೇರಿದಂತೆ ಅಗತ್ಯ ವಸ್ತುಗಳು ಸಿಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಈ ಸಂದರ್ಭದಲ್ಲಿ ನಾಯಕರು ಗ್ರಾಮದ ಜನರಿಗೆ ಭರವಸೆ ನೀಡಿದರು.
ಇದನ್ನೂ ಓದಿ :ಹುಲಿಹೈದರ್ ಗ್ರಾಮದಲ್ಲಿ ಮೃತರ ಮನೆಗಳಿಗೆ ಬೀಗ.. ಪರಿಹಾರದ ಹಣದೊಂದಿಗೆ ಡಿಸಿ ವಾಪಸ್