ಕೊಪ್ಪಳ:ಸರ್ಕಾರ ಎಲ್ಕೆಜಿ, ಯುಕೆಜಿ ಆರಂಭಿಸುವುದಾದರೆ ಅಂಗನವಾಡಿಗಳಲ್ಲಿಯೇ ಆರಂಭಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು.
ಅಂಗನವಾಡಿಗಳಲ್ಲೇ ಎಲ್ಕೆಜಿ, ಯುಕೆಜಿ ಆರಂಭಿಸುವಂತೆ ಆಗ್ರಹಿಸಿ ಪ್ರತಿಭಟನೆ - ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಎಲ್ಕೆಜಿ, ಯುಕೆಜಿ ಆರಂಭಿಸುವುದಾದರೆ ಅಂಗನವಾಡಿಗಳಲ್ಲಿಯೇ ಆರಂಭಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯದಲ್ಲಿ ಸರ್ಕಾರ ಎಲ್ಕೆಜಿ, ಯುಕೆಜಿ ಪ್ರಾರಂಭಿಸುವ ಚಿಂತನೆ ನಡೆಸಿದೆ. ಕಾನ್ವೆಂಟ್ಗಳಿಂದಾಗಿ ಈಗಾಗಲೇ ಅಂಗನವಾಡಿಗಳಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಸರ್ಕಾರ ಎಲ್ಕೆಜಿ ಹಾಗೂ ಯುಕೆಜಿಗಳನ್ನು ಸರ್ಕಾರಿ ಪಬ್ಲಿಕ್ ಶಾಲೆಗಳಲ್ಲಿ ಆರಂಭಿಸಿದರೆ ಮಕ್ಕಳು ಅಂಗನವಾಡಿಗಳಿಗೆ ಬರದಂತಾಗುತ್ತದೆ. ಇದರಿಂದ ಸುಮಾರು 45 ವರ್ಗಳಿಂದ ನಡೆದುಕೊಂಡು ಬಂದಿರುವ ಐಸಿಡಿಎಸ್ ಯೋಜನೆಯ ಗತಿ ಏನು? ಅಲ್ಲದೆ ಅಂಗನವಾಡಿಗಳ ಗತಿ ಏನು? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.
ಸರ್ಕಾರ ಒಂದು ವೇಳೆ ಎಲ್ಕೆಜಿ, ಯುಕೆಜಿ ಪ್ರಾರಂಭಿಸುವುದಾದರೆ ಅಂಗನವಾಡಿಗಳಲ್ಲೇ ಪ್ರಾರಂಭಿಸಬೇಕು. ಇದಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿ. ಪಠ್ಯಪುಸ್ತಕಗಳು, ಮಕ್ಕಳಿಗೆ ಸಮವಸ್ತ್ರ ಒದಗಿಸಬೇಕು ಎಂಬ ಬೇಡಿಕೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮುಖಂಡರಾದ ಬಸವರಾಜ ಶೀಲವಂತರ, ಎ.ಬಿ.ದಿಂಡೂರ, ಎ.ಜಿ.ಮಣ್ಣೂರ, ಮಮತಾಜ್ ಕಂದಗಲ್, ಮರಿಬಸಮ್ಮ, ಗಾಳೆಪ್ಪ ಮುಂಗೋಲಿ, ಶಿವಪ್ಪ ಹಡಪದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.