ಕೊಪ್ಪಳ:ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಎರಡು ದಿನಗಳ ಕಾಲ ನಡೆದ ಐತಿಹಾಸಿಕ ಆನೆಗುಂದಿ ಉತ್ಸವಕ್ಕೆ ಇಂದು ವರ್ಣರಂಜಿತ ತೆರೆ ಬಿತ್ತು. ಶ್ರೀಕೃಷ್ಣದೇವರಾಯ ಮುಖ್ಯ ವೇದಿಕೆಯಲ್ಲಿ ನಡೆದ ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಉತ್ಸವಕ್ಕೆ ತೆರೆ ಎಳೆಯಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಉತ್ಸವದ ಯಶಸ್ವಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣರಾದ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಅಧಿಕಾರಿ, ಸಿಬ್ಬಂದಿ, ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಐತಿಹಾಸಿಕ ಆನೆಗುಂದಿ ಉತ್ಸವಕ್ಕೆ ವರ್ಣರಂಜಿತ ತೆರೆ ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಂಪಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಒಟ್ಟು 29 ಗ್ರಾಮಗಳು ಬರುತ್ತವೆ. ಈ ಪೈಕಿ 15 ಗ್ರಾಮಗಳು ಆನೆಗುಂದಿ ವ್ಯಾಪ್ತಿಗೆ ಬರುತ್ತವೆ. ಆದರೆ, ಪ್ರಾಧಿಕಾರದ ಮೂಲಕ ಸಿಗಬೇಕಾದ ಸೌಲಭ್ಯಗಳು, ಪ್ರಾಶಸ್ತ್ಯ ಆನೆಗುಂದಿ ಭಾಗದ ಗ್ರಾಮಗಳಿಗೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಎಲ್ಲರ ಸಹಕಾರದಿಂದ ಆನೆಗುಂದಿ ಉತ್ಸವ ಅದ್ಧೂರಿಯಾಗಿ ಯಶಸ್ವಿಯಾಗಿ ನಡೆದಿದೆ. ದೊಡ್ಡ ಕಾರ್ಯಕ್ರಮ ಎಂದರೆ ಅಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಾಗೋದು ಸಹಜ. ಇದು ನಮ್ಮ ಉತ್ಸವ ಎಂದರು.
ಆನೆಗುಂದಿ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವದ ಸ್ಥಳ. ಆಂಜನೇಯ ಸ್ವಾಮಿ ಜನಿಸಿದ ಅಂಜನಾದ್ರಿ ಬೆಟ್ಟವಿರುವ ಸ್ಥಳ. ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ಮಾಡಬೇಕಿದೆ. ಇದಕ್ಕಾಗಿ ಈಗಾಗಲೇ ಸರ್ಕಾರದಿಂದ ಡಿಪಿಆರ್ ಸಹ ರೆಡಿ ಮಾಡಲಾಗಿದೆ. ದಿ. ಎಂ.ಪಿ. ಪ್ರಕಾಶ್ ಹಾಗೂ ಮಾಜಿ ಸಚಿವ, ರಾಜವಂಶಸ್ಥ ಶ್ರೀರಂಗದೇವರಾಲು ಅವರನ್ನು ನಾನು ಇಂದು ಸ್ಮರಿಸಬೇಕು. ಏಕೆಂದರೆ ಇಂದು ಆನೆಗುಂದಿ ಉತ್ಸವ ಆಚರಣೆಯಾಗುತ್ತಿದೆ ಎಂದರೆ ಅವರು ಕಾರಣರು. ಸರ್ಕಾರ ಒಂದು ದಿನಾಂಕ ನಿಗದಿಪಡಿಸಿ ಪ್ರತಿವರ್ಷವೂ ಆನೆಗುಂದಿ ಆಚರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಉತ್ಸವ ಯಶಸ್ವಿಗೆ ಕಾರಣವಾದ ಶಾಸಕರಿಗೆ, ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಅನೇಕ ಅಧಿಕಾರಿಗಳಿಗೆ ಆನೆಗುಂದಿ ಗ್ರಾಮಸ್ಥರು ಸನ್ಮಾನಿಸಿದರು. ಸಣ್ಣ ಪುಟ್ಟ ವ್ಯತ್ಯಾಸಗಳ ನಡುವೆ ಆನೆಗುಂದಿ ಉತ್ಸವ ವರ್ಣರಂಜಿತ ತೆರೆಕಂಡಿತು.