ಗಂಗಾವತಿ:ಆನೆಗೊಂದಿ ಉತ್ಸವವನ್ನು ಜನಾಕರ್ಷಣೆಯನ್ನಾಗಿಸುವ ಉದ್ದೇಶಕ್ಕೆ ಜಿಲ್ಲಾಡಳಿತ ಹಮ್ಮಿಕೊಂಡಿರುವ ನಾನಾ ಸ್ಪರ್ಧೆ, ಪ್ರದರ್ಶನಗಳ ಪೈಕಿ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಗಾಳಿಪಟ ಹಾರಿಸುವ ಕ್ರೀಡೆ ಜನರ ಗಮನ ಸೆಳೆಯಿತು.
ಶುಭ್ರ ಬಾನಂಗಳದಲ್ಲಿ ಹತ್ತಾರು ನಮೂನೆ, ನಾನಾ ವಿನ್ಯಾಸದ ಗಾಳಿಪಟಗಳು ಹಾರಾಡಿ ಚಿತ್ತಾರ ಮೂಡಿಸಿದವು. ಅಂತರರಾಷ್ಟ್ರೀಯ ಗಾಳಿಪಟ ಪ್ರದರ್ಶಕರಾದ ಬೆಂಗಳೂರಿನ ಕೆ.ವಿ.ರಾವ್, ಮೈಸೂರಿನ ಸುಭಾಶ್ ಹಾಗೂ ದೊಡ್ಡಬಳ್ಳಾಪುರದ ಮನೀಷ್ ಸುಮಾರು 30ಕ್ಕೂ ಹೆಚ್ಚು ಮಾದರಿಯ ಗಾಳಿಪಟ ಹಾರಿಸಿ ಜನರ ಗಮನ ಸೆಳೆದರು.