ಗಂಗಾವತಿ:ಜನವಸತಿ ಇಲ್ಲದ ಮತ್ತು ನಿರ್ಜನ ಪ್ರದೇಶದಲ್ಲಿ ಪ್ರಾಚೀನ ದೇಗುಲವೊಂದು ಪತ್ತೆಯಾಗಿದ್ದು, ಬಹುಶಃ ಸುಮಾರು ಐದು ನೂರರಿಂದ ಏಳು ನೂರು ವರ್ಷಗಳ ಹಿಂದೆ ನಿರ್ಮಾಣ ಮಾಡಿರಬಹುದು ಎಂದು ಸಮೀಪದ ಹೊಲಗಳ ರೈತರು ತಿಳಿಸಿದ್ದಾರೆ. ಈ ದೇಗುಲದ ಸ್ಥಳಕ್ಕೆ ಇತಿಹಾಸಕಾರ, ಸಂಶೋಧಕ ಡಾ. ಶರಣಬಸಪ್ಪ ಕೊಲ್ಕಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಗಂಗಾವತಿ ನಗರದಿಂದ ಸಿದ್ಧಿಕೇರಿ ಮಾರ್ಗವಾಗಿ ಜನಸಂಚಾರ ವಿರಳವಾಗಿರುವ ಸೂರ್ಯನಾಯಕನ ತಾಂಡಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಬೆಟ್ಟಕ್ಕೆ ಹೊಂದಿಕೊಂಡಂತಿರುವ ಪ್ರದೇಶದಲ್ಲಿ ಸುಸ್ಥಿತಿಯಲ್ಲಿರುವ ಈ ದೇಗುಲ ಪತ್ತೆಯಾಗಿದೆ. ದೇಗುಲದ ಪ್ರವೇಶದಲ್ಲಿ ಸಭಾ ಮಂಟಪವಿದ್ದು, ಸ್ಥಳೀಯರು ಇದನ್ನು ಕನ್ನಿಕದೇವರ ಗುಡಿ ಎಂದು ಕರೆಯುತ್ತಿದ್ದಾರೆ. ಜನ ಬಳಕೆ ಇಲ್ಲದ್ದರಿಂದ ದೇಗುಲದಲ್ಲಿನ ಆವರಣವನ್ನು ರೈತರು ರಸಗೊಬ್ಬ ದಾಸ್ತಾನು ಮಾಡಲು ಬಳಸಿಕೊಳ್ಳುತ್ತಿದ್ದಾರೆ.