ಕುಷ್ಟಗಿ(ಕೊಪ್ಪಳ): ನಾನು ಕೋಟಿಗಟ್ಟಲೇ ಸಾಲಗಾರ. ಬ್ಯಾಂಕಿನಲ್ಲಿ, ಸಹಕಾರ ಬ್ಯಾಂಕ್, ಬಂಧುಗಳಲ್ಲಿ, ಸ್ನೇಹಿತರಲ್ಲಿ ಕೋಟಿಗಟ್ಟಲೇ ಸಾಲ ಮಾಡಿದ್ದೇನೆಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ನಗರದ ಶಾಸಕರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಆರೋಪಕ್ಕೆ ಸ್ಪಷ್ಟನೆ ನೀಡಿ, ನನ್ನ ಕುಟುಂಬದ ವಿಚಾರಕ್ಕಾಗಿ ಸಾಲ ಮಾಡಿರುವುದು ಸತ್ಯ. ನನ್ನೊಂದಿಗೆ ಸಾಲದ ವ್ಯವಹಾರ ಮಾಡಿದವರನ್ನು ದೊಡ್ಡನಗೌಡರ ಮನೆಗೆ ಕರೆಯಿಸಿ ಲೆಕ್ಕ ಮಾಡಿದರೆ 24 ತಾಸಿನಲ್ಲಿ ಕೊಡಬೇಕಾದ ಸಾಲದ ಚುಕ್ತ ಮಾಡುವೆ. ನನಗೆ ಸಾಲ ಕೊಟ್ಟವರು, ದೊಡ್ಡನಗೌಡರಿಗೆ ಸಾಲ ಕೊಡಿಸಿ ಎಂದು ಕೇಳಿದ್ರೆ ನನಗೆ ಫೋನ್ ಮಾಡಿ ತಿಳಿಸಲಿ, ನನ್ನ ಚಿರಾಸ್ತಿ, ಚರಾಸ್ತಿ, ಮನೆಯವರ ಹೆಸರಿನಲ್ಲಿರುವ ಆಸ್ತಿ ಮಾರಿಯಾದರೂ ಸಾಲ ತೀರಿಸುವೆ. ಆಸ್ತಿ ಹಾಗೂ ಸಾಲದ ವಿವರದ ಮಾಹಿತಿಯನ್ನು ಲೋಕಾಯುಕ್ತಕ್ಕೆ ನೀಡಿದ್ದು, ಎಲ್ಲವೂ ಬಹಿರಂಗ ಸತ್ಯ. ದೊಡ್ಡನಗೌಡ ಪಾಟೀಲಗೆ ಪರ್ಸೇಂಟೇಜ್ ವ್ಯವಹಾರ ಗೊತ್ತಿದೆ ಎಂದರು.