ಗಂಗಾವತಿ :ತಾಲೂಕಿನ ಆನೆಗೊಂದಿ ಹೋಬಳಿಯಲ್ಲಿರುವ ಧಾರ್ಮಿಕ ತಾಣಗಳಿಗೆ ಯಾತ್ರೆಗೆಂದು ಬಂದಿದ್ದ ನಮ್ಮ ಮೇಲೆ ಹಲ್ಲೆ ಮಾಡಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಉತ್ತರ ಪ್ರದೇಶದ ನೂರಾರು ಮಂದಿ ಗಂಗಾವತಿ ಗ್ರಾಮೀಣ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.
ಧಾರ್ಮಿಕ ಸ್ಥಳಗಳನ್ನು ಸಂದರ್ಶನ ಮಾಡಿಕೊಂಡು ವಾಪಸ್ ತವರಿನತ್ತ ತೆರಳುತ್ತಿದ್ದಾಗ ಆಕಸ್ಮಿಕವಾಗಿ ಬವಸನದುರ್ಗ (ಕೊರಮ್ಮ ಕ್ಯಾಂಪ್) ಗ್ರಾಮದಲ್ಲಿ ಯಾತ್ರಾರ್ಥಿಗಳಿದ್ದ ವಾಹನವು ಕೇಬಲ್ ವೈರ್ಗೆ ತಗುಲಿತ್ತು. ಇದನ್ನೇ ನೆಪ ಮಾಡಿಕೊಂಡ ಗ್ರಾಮದ ನಾಗರಾಜ್ ಹಾಗೂ ಇತರೆ ಐವರು ಯಾತ್ರಾರ್ಥಿಗಳಿದ್ದ ವಾಹನದ ಮೇಲೆ ದಾಳಿ ಮಾಡಿ, ಗಾಜುಗಳನ್ನು ಪುಡಿಗಟ್ಟಿ, ವಾಹನದಲ್ಲಿದ್ದವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ರಾಮಾಜಿ ತಿವಾರಿ ಎಂಬುವರು ನೀಡಿದ ದೂರಿನ ಮೇರೆಗೆ ಬಸವನದುರ್ಗ ಗ್ರಾಮದ ನಾಗರಾಜ್ ಬಾಲಪ್ಪ ಹಾಗೂ ಇತರೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಹಲ್ಲೆ ವೇಳೆ ಉತ್ತರ ಪ್ರದೇಶದ ಯಾತ್ರಾರ್ಥಿಗಳಾದ ರಾಮಕುಮಾರ ರಾಮಾಸೀಯಾ ಮತ್ತು ಮೋನು ಬಲರಾಮ್ ಎಂಬ ಇಬ್ಬರಿಗೆ ಗಾಯಗಳಾಗಿದ್ದು, ಗಂಗಾವತಿ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.