ಕುಷ್ಟಗಿ(ಕೊಪ್ಪಳ): ವೈಯಕ್ತಿಕ ಸಾಲ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರ ಕಿರಿಕಿರಿಗೆ ಬೇಸತ್ತು ಕುಷ್ಟಗಿಯ ಕೃಷಿ ಅಧಿಕಾರಿ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ಅಧಿಕಾರಿ ರಾಘವೇಂದ್ರ ಕೊಂಡಗುರಿ ಎಂಬುವರು ಕಳೆದ ಡಿ.1 ರಿಂದ ನಾಪತ್ತೆಯಾಗಿದ್ದಾರೆ.
ಮೂಲತಃ ಯಲಬುರ್ಗಾ ತಾಲೂಕಿನ ಹಿರೇಅರಳಹಳ್ಳಿ ಗ್ರಾಮದ ನಿವಾಸಿಯಾದ ರಾಘವೇಂದ್ರ ಕೊಂಡಗುರಿ (37) ಅವರು ಕುಷ್ಟಗಿ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಡಿ.1 ರಂದು ಬೆಳಗ್ಗೆ 10 ಗಂಟೆಗೆ ಕಚೇರಿ ಕೆಲಸಕ್ಕೆಂದು ಮನೆಯಿಂದ ನಿರ್ಗಮಿಸಿದವರು ವಾಪಸ್ ಬಂದಿಲ್ಲ. ಡಿ.6 ರಂದು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು ದೂರು ನೀಡಲಾಗಿದೆ ಎಂದು ಪತ್ನಿ ವಿದ್ಯಾಶ್ರೀ ಕೊಂಡಗುರಿ ತಿಳಿಸಿದ್ದಾರೆ.
ಸದರಿ ದೂರಿನಲ್ಲಿ ಡಿ.1ರಂದು ಅವರ ಪರಿಚಯಸ್ಥ ಹನುಮೇಶ ಕೊಂಡಗುರಿ ಅವರ ಬೈಕ್ನಲ್ಲಿ ಬಸ್ ನಿಲ್ದಾಣದವರೆಗೂ ಬಂದಿದ್ದಾರೆ. ಅಲ್ಲಿಂದ ಕಚೇರಿಗೆ ಹೋಗದೆ ನಾಪತ್ತೆಯಾಗಿದ್ದಾರೆ. ಕಾಣೆಯಾದ ಸಂದರ್ಭದಲ್ಲಿ ಕಪ್ಪು ಬಣ್ಣದ ನೈಟ್ ಪ್ಯಾಂಟ್, ಕಪ್ಪು ಟೀ ಶರ್ಟ್, ಬ್ರೌನ್ ಕಲರ್ ಜರ್ಕಿನ್ ಧರಿಸಿದ್ದಾರೆ. 6 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ಹಿಂದಿ, ಇಂಗ್ಲಿಷ್ ಮಾತನಾಡುತ್ತಾರೆಂದು ದೂರಿನಲ್ಲಿ ವಿವರಿಸಲಾಗಿದೆ.