ಕುಷ್ಟಗಿ: ತಾಲೂಕಿನ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದ್ದು, ರೋಗ ಪೀಡಿತ ಪ್ರದೇಶಕ್ಕೆ ಕೃಷಿ ಇಲಾಖೆ ಉಪ ಕೃಷಿ ನಿರ್ದೇಶಕ ಸಿದ್ದೇಶ್ವರ ಎಲ್ ಮತ್ತು ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ನಾಯಕ್ ಭೇಟಿ ನೀಡಿ ಪರಿಶೀಲಿಸಿದರು.
ಹೆಸರು ಬೆಳೆಗೆ ಹಳದಿ ರೋಗ: ಕೃಷಿ ಇಲಾಖೆ ಅಧಿಕಾರಿಗಳ ಭೇಟಿ, ಪರಿಶೀಲನೆ - ಕುಷ್ಟಗಿ ಹಳದಿ ರೋಗ ಪೀಡಿತ ಪ್ರದೇಶಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ
ಕುಷ್ಟಗಿ ತಾಲೂಕಿನ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದ್ದು, ರೋಗ ಪೀಡಿತ ಪ್ರದೇಶಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನಲ್ಲಿ ಹೆಕ್ಟೇರ್ ಗಟ್ಟಲೆ ಹೆಸರು ಬೆಳೆ ಬಿತ್ತನೆ ಮಾಡಲಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 7,500 ಹೆಕ್ಟೇರ್ ಗುರಿಯಲ್ಲಿ 5,900 ಹೆಕ್ಟೇರ್ ಕ್ಷೇತ್ರಕ್ಕೆ ಹೆಸರು ಬಿತ್ತನೆಯಾಗಿದೆ. ಬಹುತೇಕ ರೈತರು ಹೆಸರು ಬೆಳೆದಿದ್ದು, ಪ್ರತಿ ವರ್ಷ ಒಂದೇ ಬೆಳೆ ಬೆಳೆಯುತ್ತಿರುವುದಕ್ಕೆ ರೋಗ ವ್ಯಾಪಿಸಿದೆ ಎನ್ನಲಾಗಿದೆ.
ಇನ್ನು ರೋಗ ಹರಡುವ ಕರಿ ಶೀರು (ಹೇನು) ಬಾಧೆ ನಿಯಂತ್ರಣದಲ್ಲಿಡಬೇಕಾದರೆ ರೈತರು ಬಿಜಿಎಸ್ - 9 ತಳಿಯನ್ನು ಬಿತ್ತನೆ ಮಾಡಬೇಕು. ಗಾಳಿಯ ಮೂಲಕ ಈ ರೋಗ ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬೆಳೆಯಲ್ಲಿ ಹಳದಿ ಮತ್ತು ನೀಲಿ ಅಂಟು ಬಲೆಗಳನ್ನು ಎಕರೆಗೆ 8 ರಂತೆ ಹಾಕಬೇಕು. ಬೆಳೆಯ ಸುತ್ತಲು ಸಜ್ಜೆ, ಜೋಳದ ಬೆಳೆ ಬೆಳೆಯಬೇಕು. ಡೆಪೆನ್ ತುರಾನ್ 1 ಅನ್ನು 1 ಲೀಟರ್ ನೀರಿನಲ್ಲಿ ಸಿಂಪಡಿಸಬೇಕು. 5 ಗ್ರಾಮ್ಬೇವಿನ ಕಷಾಯವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ, ಬೀಜ ಬಿತ್ತಿದ 3-4 ವಾರಗಳಲ್ಲಿ ಸಿಂಪಡಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ನಾಯಕ್ ಸಲಹೆ ನೀಡಿದ್ದಾರೆ.