ಕೊಪ್ಪಳ :ಕೃಷಿ ಪದ್ಧತಿ ವೈಜ್ಞಾನಿಕವಾಗಿರಬೇಕು. ರೈತರಿಗೆ ಮಣ್ಣು ಪರೀಕ್ಷೆ, ಬೆಳೆ ಸಮೀಕ್ಷೆ ಸೇರಿದಂತೆ ವಿವಿಧ ಉದ್ದೇಶಗಳ ಈಡೇರಿಕೆಗೆ ಆರಂಭಿಸಿದ್ದ ಕೃಷಿ ಸಂಜೀವಿನಿ ವಾಹನಗಳು ಅನುದಾನದ ಕೊರತೆಯಿಂದ ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿವೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಲ್ಯಾಬ್ ಟು ಲ್ಯಾಂಡ್ ಎಂಬ ಧ್ಯೇಯದೊಂದಿಗೆ ಈ ವಾಹನಗಳನ್ನು ರಾಜ್ಯಾದ್ಯಂತ ನೀಡಲಾಗಿತ್ತು. ಆಗ ಕೃಷಿ ಸಚಿವರಾಗಿದ್ದ ಬಿ.ಸಿ.ಪಾಟೀಲ್ ಕೊಪ್ಪಳ ಜಿಲ್ಲೆಯಲ್ಲಿ ಹೋಬಳಿಗೊಂದರಂತೆ ಒಟ್ಟು 20 ವಾಹನಗಳನ್ನು ನೀಡಿದ್ದರು. ಈ ವಾಹನಗಳು ಕೃಷಿ ಭೂಮಿಗೆ ಹೋಗಿ ಬಂದಿದ್ದಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ನಿಂತಿವೆ. ಇದರಿಂದಾಗಿ ಸರ್ಕಾರದ ಕೋಟ್ಯಂತರ ರೂಪಾಯಿ ಹಣ ಪೋಲಾಗುತ್ತಿದೆ. ರೈತರಿಗೆ ವರದಾನವಾಗಬೇಕಿದ್ದ ಈ ಹೊಸ ಕಲ್ಪನೆಯ ವಾಹನಗಳು ಆರಂಭದಲ್ಲೇ ವಿಫಲವಾಗಿದೆ. ಸರ್ಕಾರ ಈಗಲಾದರೂ ವಾಹನಗಳಿಗೆ ತಜ್ಞರು, ಅಗತ್ಯ ಯಂತ್ರಗಳನ್ನು ನೀಡಿ ರೈತರಿಗೆ ಉಪಯೋಗವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಅನುದಾನದ ಕೊರತೆಯೇ ಕಾರಣ:ಜಿಲ್ಲೆಯ ಖನಿಜ ನಿಧಿಯಿಂದ ಸುಮಾರು 1.50 ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷಿ ಸಂಜೀವಿನಿ ವಾಹನಗಳನ್ನು ಖರೀದಿಸಲಾಗಿದೆ. ಕೃಷಿ ಸಂಜೀವಿನಿ ವಾಹನದಲ್ಲಿ ಒಬ್ಬ ತಜ್ಞರು, ಒಬ್ಬ ಚಾಲಕರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ. ತಿಂಗಳಿಗೆ ಕೇವಲ 80 ಲೀಟರ್ ಡೀಸೆಲ್ ನೀಡಲಾಗುತ್ತದೆ. ಆದರೆ ಇದರ ನಿರ್ವಹಣೆಗೆ ಪ್ರತ್ಯೇಕ ಅನುದಾನವನ್ನು ಸರ್ಕಾರ ನೀಡುತ್ತಿಲ್ಲ. ಇದರಿಂದಾಗಿ ವಾಹನಗಳು ನಿಂತಲ್ಲೇ ನಿಂತಿವೆ.