ಕೊಪ್ಪಳ:ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಬಳಿ ಸ್ಥಾಪನೆಯಾಗುತ್ತಿರುವ ಏಕಸ್ ಕಂಪೆನಿಯ ಆಟಿಕೆ ವಸ್ತುಗಳ ಕೈಗಾರಿಕೆಗೆ ನಾಳೆ ಭೂಮಿ ಪೂಜೆ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಶಾಸಕ ಹಾಲಪ್ಪ ಆಚಾರ್ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಆಗಮಿಸುತ್ತಿದ್ದು, ಎಲ್ಲಾ ರೀತಿಯಿಂದಲೂ ಏಕಸ್ ಕಂಪೆನಿ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ ಭಾನಾಪುರ ಬಳಿ ಬೃಹತ್ ಪೆಂಡಾಲ್ ಹಾಕಿದ್ದು, ಕಾರ್ಯಕ್ರಮದಲ್ಲಿ ಗಣ್ಯರಿಗೆ, ಜನಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಓದಿ: ಬೆಳ್ತಂಗಡಿ ಸಮೀಪ ಸತ್ತು ಬಿದ್ದ ಹದ್ದುಗಳು; ಹಕ್ಕಿಜ್ವರದ ಅತಂಕ
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಹಾಲಪ್ಪ ಆಚಾರ್, ಏಕಸ್ ಕಂಪೆನಿಯು ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಆಟಿಕೆ ವಸ್ತುಗಳ ತಯಾರಿಕಾ ಘಟಕ ಸ್ಥಾಪನೆ ಮಾಡುತ್ತಿರೋದು ಒಂದು ಒಳ್ಳೆಯ ಬೆಳವಣಿಗೆ. ಇದರಿಂದ ಈ ಭಾಗದ ಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಆಟಿಕೆ ವಸ್ತುಗಳ ತಯಾರಿಕಾ ಘಟಕದ ಭೂಮಿ ಪೂಜೆಗೆ ಸಿಎಂ ಯಡಿಯೂರಪ್ಪ, ಸಚಿವರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಬಿ.ಸಿ. ಪಾಟೀಲ್ ಅವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ಆದರೆ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದು, ಇದರಿಂದ ಸ್ಥಳೀಯರಿಗೆ ಅನೇಕ ಅವಕಾಶಗಳು ದೊರೆಯುತ್ತವೆ ಎಂದರು.