ಕೊಪ್ಪಳ: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಇವರಿಗೆ ನೀಡುವ ಶಿಕ್ಷೆಯಿಂದ ಇಂತಹ ಕೃತ್ಯಗಳಲ್ಲಿ ತೊಡಗುವವರು ನೂರು ಬಾರಿ ಯೋಚಿಸಬೇಕು ಎಂದು ನಟಿ ಪೂಜಾ ಗಾಂಧಿ ಹೇಳಿದ್ದಾರೆ.
ಮೈಸೂರು ಸಾಮೂಹಿಕ ಅತ್ಯಾಚಾರ ಘಟನೆ ಬಗ್ಗೆ ನಟಿ ಪೂಜಾ ಗಾಂಧಿ ಪ್ರತಿಕ್ರಿಯೆ ಮೈಸೂರು ಗ್ಯಾಂಗ್ ರೇಪ್ ಕುರಿತು ನಗರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗಾಂಧಿ, ಈ ಘಟನೆ ತುಂಬಾ ಬೇಸರವೆನಿಸುತ್ತದೆ. ಇಂತಹ ಪ್ರಕರಣಗಳು ಬೇರೆ ಬೇರೆ ರಾಜ್ಯದಲ್ಲಿ ನಡೆಯುತ್ತಿದ್ದನ್ನು ನಾವು ಕೇಳುತ್ತಿದ್ದೆವು. ಆದರೆ ಈಗ ಮೈಸೂರಿನಲ್ಲೇ ನಡೆದಿದೆ. ಇದು ನಿಜಕ್ಕೂ ಬೇಸರದ ಘಟನೆ. ಆದಷ್ಟು ಬೇಗ ಪ್ರಕರಣದ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದರು.
ಇದನ್ನೂ ಓದಿ: Mysuru Gang Rape: ಮುಂಬೈಗೆ ತೆರಳಿದ ಸಂತ್ರಸ್ತೆಗೆ ಆರೋಪಿಗಳ ಫೋಟೋ ಕಳಿಸಿ ಖಚಿತಪಡಿಸಿಕೊಂಡ ಪೊಲೀಸರು!
ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಘಟನೆಗಳಿಂದ ಮಹಿಳೆಯರಿಗೆ ರಕ್ಷಣೆ ಎಲ್ಲಿದೆ ಎಂಬ ಪ್ರಶ್ನೆ ಮೂಡುತ್ತದೆ. ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಗಂಡು ಮಕ್ಕಳಿಗೆ ಅವರ ಮನೆಯಲ್ಲಿ ಹೇಳಿಕೊಡಬೇಕು. ಎಲ್ಲರ ಮನೆಯ ಹೆಣ್ಣು ಮಕ್ಕಳು ಒಂದೇ. ಆರೋಪಿಗಳಿಗೆ ಕಾನೂನು ಪ್ರಕಾರ ಏನು ಕ್ರಮ ಇದೆಯೋ ಆ ಕ್ರಮ ಜರುಗಿಸಬೇಕು. ಅತ್ಯಾಚಾರದ ಕೃತ್ಯಕ್ಕೆ ಮುಂದಾಗುವ ಮುನ್ನ ನೂರು ಬಾರಿ ಯೋಚಿಸುವಂತಹ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸಣ್ಣ ಸಣ್ಣ ಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ಇಂತಹ ಮನಸ್ಥಿತಿಯವರಿಗೆ ಕಠಿಣ ಶಿಕ್ಷೆ ನೀಡಬೇಕು. ನಾನು ಕಾನೂನನ್ನು ಗೌರವಿಸುತ್ತೇನೆ. ಮಹಿಳೆಯರ ರಕ್ಷಣೆಗಾಗಿ ಇರುವ ಕಾನೂನುಗಳಿಂದ ಹಳ್ಳಿಯಲ್ಲಿರುವ ಹೆಣ್ಣು ಮಕ್ಕಳು ಸೇರಿದಂತೆ ಎಲ್ಲ ಮಹಿಳೆಯರು ನಾವು ಸೇಫ್ ಆಗಿದ್ದೇವೆ ಎಂಬ ಭಾವನೆ ಬರಬೇಕು ಎಂದು ಪೂಜಾ ಗಾಂಧಿ ಹೇಳಿದರು.