ಕೊಪ್ಪಳ: ಜಿಲ್ಲೆಯಲ್ಲಿ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಇಲ್ಲಿನ ಗಿಣಿಗೇರಿ ಗ್ರಾಮದ ಮಹಾತ್ಮಗಾಂಧಿ ವೃತ್ತದಲ್ಲಿ ನವಚೇತನ ತರುಣ ಸಂಘ ಸ್ಥಾಪಿಸಿರುವ ಗಣೇಶೋತ್ಸವದಲ್ಲಿ ಪುನೀತ್ ರಾಜ್‌ಕುಮಾರ್ ಅವರನ್ನು ವಿಶೇಷವಾಗಿ ಸ್ಮರಣೆ ಮಾಡಲಾಗುತ್ತಿದೆ.
ಕೊಪ್ಪಳದ ಗಣೇಶೋತ್ಸವದಲ್ಲಿ ಅಪ್ಪುವಿನ ಜೀವನ ಚರಿತ್ರೆ ಪ್ರದರ್ಶನ ಪುನೀತ್ ರಾಜ್‌ಕುಮಾರ್ ಅವರು ತಮ್ಮ ವ್ಯಕ್ತಿತ್ವದಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಸಿನಿಮಾದ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಕಿರಿಯ ವಯಸ್ಸಿನಲ್ಲಿಯೇ ಹೆಚ್ಚಿನ ಸಾಧನೆ ಮಾಡಿ ಎಲ್ಲರಿಗೂ ಮಾದರಿಯಾಗಿದ್ದರು. ಹಾಗಾಗಿ ಇಲ್ಲಿನ ಗಣೇಶೋತ್ಸವ ಸಂದರ್ಭದಲ್ಲಿ ಅವರ ಜೀವನ ಚರಿತ್ರೆಯನ್ನು ಪ್ರದರ್ಶನ ಮಾಡಲಾಗುತ್ತಿದೆ.
ಹತ್ತು ನಿಮಿಷದ ಈ ಕಿರು ದೃಶ್ಯಾವಳಿಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ಸಿನಿ ಜೀವನ ಮತ್ತು ವೈಯಕ್ತಿಕ ಜೀವನವನ್ನು ಪ್ರದರ್ಶನ ಮಾಡಲಾಗುತ್ತಿದೆ. ಈ ದೃಶ್ಯಗಳು ಆಕರ್ಷಕವಾಗಿದ್ದು, ಸಾಕಷ್ಟು ಜನರನ್ನು ಆಕರ್ಷಿಸಿದೆ.
ಅಪ್ಪು ಜೀವನದ ಕುರಿತು ವಿಶೇಷ ಪ್ರದರ್ಶನ: ನವಚೇತನ ತರುಣ ಸಂಘದಲ್ಲಿನ ಪ್ರತಿಭಾನ್ವಿತ ಕಲಾವಿದರು ಸೇರಿ ಈ ಪ್ರದರ್ಶನವನ್ನು ತಯಾರಿಸಿದ್ದಾರೆ. ಇಲ್ಲಿ ಯಾವುದೇ ಗ್ರಾಫಿಕ್ಸ್ ಬಳಸಲಾಗಿಲ್ಲ. ಸ್ವತಃ ತಂಡದ ಕಲಾವಿದರೇ ದೃಶ್ಯಗಳ ವಿವರಣೆಯನ್ನು ಹಿನ್ನೆಲೆ ಧ್ವನಿ ಮೂಲಕ ನೀಡಿದ್ದಾರೆ.
ಗಣೇಶನ ದರ್ಶನಕ್ಕೆ ಬರುವ ಭಕ್ತರಿಗೆ ಇಲ್ಲಿ ಮೊದಲು ಕಾಣುವುದೇ ಒಂದು ತೊಟ್ಟಿಲು. ಅದರಲ್ಲೊಂದು ಮುದ್ದಾದ ಮಗು ಗಮನಸೆಳೆಯುತ್ತದೆ. ಹಾಗೆ ಮುಂದುವರಿದರೆ ಅಪ್ಪುವಿನ ಬಾಲ್ಯದ ಭಾವಚಿತ್ರಗಳನ್ನು ಪ್ರದರ್ಶಿಸಲಾಗಿದೆ. ನಂತರ ಅಪ್ಪು ತಮ್ಮ ಕುಟುಂಬದವರೊಂದಿಗೆ ಇರುವ ಅಪರೂಪದ ಚಿತ್ರಗಳನ್ನು ಹಾಕಲಾಗಿದೆ. ಜೊತೆಗೆ ಇಲ್ಲಿ ಅಪ್ಪುವಿನ ನೀನೇ ರಾಜಕುಮಾರ ಹಾಡು, ಇದರಲ್ಲಿ ನಿಜವಾದ ಪಾರಿವಾಳವೊಂದು ಹಾಡಿನ ಮದ್ಯೆ ಹಾರಿಬಂದು ಅಪ್ಪು ಅವರ ಕಟೌಟ್ ಮೇಲೆ ಬಂದು ಕುಳಿತುಕೊಳ್ಳುತ್ತದೆ.
ಆಗ ಪರದೆಯ ಹಿನ್ನೆಲೆಯಿಂದ ತೇಲಿಬರುವ ಬೊಂಬೆ ಹೇಳುತೈತೆ....ಅಪ್ಪು ಅಜರಾಮರ....ಹಾಡು ನೆರೆದಿದ್ದವರ ಕಣ್ಣಾಲೆಗಳಲ್ಲಿ ನೀರು ಜಿನುಗುವಂತೆ ಮಾಡುತ್ತದೆ. ಹಾಡು ಮುಗಿಯುತ್ತಿದ್ದಂತೆ ಪರದೆ ಸರಿದು ಗಣೇಶನ ದರ್ಶನವಾಗುತ್ತದೆ. ಇಲ್ಲಿನ ಗಣೇಶೋತ್ಸವ ಅಪ್ಪು ಮೇಲಿನ ಅಭಿಮಾನಕ್ಕೆ ವಿಶಿಷ್ಟ ವೇದಿಕೆಯಾಗಿದೆ.
ಇದನ್ನೂ ಓದಿ :ಗಣಪತಿ ನಿಮಜ್ಜನ ಮೆರವಣಿಗೆ: ಡಿಜೆಗಾಗಿ ಹೆದ್ದಾರಿಯಲ್ಲಿ ಪ್ರತಿಭಟನೆ