ಕೊಪ್ಪಳ:ಮರಳು ನೀತಿಯನ್ನು ಮಾರ್ಪಡಿಸಲು ಈಗಾಗಲೇ ಸಾಕಷ್ಟು ಸಭೆಗಳನ್ನು ನಡೆಸಲಾಗಿದ್ದು, ಶೀಘ್ರದಲ್ಲಿ ನೀತಿಯನ್ನು ಸರಳೀಕೃತಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗಣಿ ಮತ್ತು ಭೂವಿಜ್ಞಾನ ಇಲಾಖೆಯು ರಾಜ್ಯಕ್ಕೆ ಆದಾಯ ತರುವ ಇಲಾಖೆಯಾಗಿದೆ. ಗಣಿ ಸಂಬಂಧಿತ ಉದ್ದಿಮೆದಾರರೊಂದಿಗೆ ಸ್ನೇಹ ಪರವಾಗಿದ್ದುಕೊಂಡು ಮತ್ತು ಭೂ ಸಂಪತ್ತು ಕಳ್ಳತನ ಮಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದ ಬೊಕ್ಕಸಕ್ಕೆ ಆದಾಯ ತರುವ ಇಲಾಖೆ ಇದಾಗಿದೆ ಎಂದರು.
ಮರಳು ನೀತಿ ಮಾರ್ಪಡಿಸಲು ಎಲ್ಲ ಕ್ರಮ : ಸಚಿವ ಸಿ.ಸಿ.ಪಾಟೀಲ್ ಮರಳಿಗೆ ಸಂಬಂಧಪಟ್ಟಂತೆ ನೀತಿಯನ್ನು ಮಾರ್ಪಡಿಸಿ ಜಾರಿಗೆ ತರಲು ಈಗಾಗಲೇ ಸಾಕಷ್ಟು ಸಭೆಗಳನ್ನು ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಅಧಿಕಾರಿಗಳನ್ನು ಗುಜರಾತಿಗೆ ಕಳುಹಿಸಲಾಗಿದೆ. ಅಲ್ಲದೆ, ತೆಲಂಗಾಣ ಮಾದರಿಯಲ್ಲಿ ಮರಳು ನೀತಿ ಜಾರಿಗೆ ತರುವ ಬಗ್ಗೆ ಅಭಿಪ್ರಾಯವನ್ನು ಸಿಎಂ ವ್ಯಕ್ತಪಡಿಸಿದ್ದಾರೆ. ಸಿಎಂ ಅವರು ವಿದೇಶ ಪ್ರವಾಸದಿಂದ ವಾಪಸ್ ಬಂದ ಬಳಿಕ ಅವರೊಂದಿಗೆ ಚರ್ಚಿಸಿ ಮತ್ತು ಬಜೆಟ್ ಬಳಿಕ ಈ ಮರಳಿನ ಸಮಸ್ಯೆಗೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಯಲು ಈಗಾಗಲೇ ದಕ್ಷ ಅಧಿಕಾರಿವೋರ್ವರನ್ನು ನೇಮಿಸಲಾಗಿದೆ. ಅವರಿಂದ ನಾವು ಒಳ್ಳೆಯ ಕೆಲಸ ನಿರೀಕ್ಷೆ ಮಾಡುತ್ತಿದ್ದೇವೆ. ಅಕ್ರಮ ಮರಳು ಗಣಿಗಾರಿಕೆ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಹಾಗೂ ಸಾಮಾನ್ಯ ಜನರು ಮನೆ ಕಟ್ಟಿಸಲು ಹಾಕಿಸಿಕೊಂಡ ಮರಳನ್ನು ಜಪ್ತಿ ಮಾಡದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಗಣಿಗಾರಿಕೆ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದವರು ದಂಡ ಕಟ್ಟಲೇಬೇಕು, ಬೇರೆ ಮಾತೇ ಇಲ್ಲ ಎಂದು ಸಚಿವ ಸಿ.ಸಿ. ಪಾಟೀಲ್ ಸ್ಪಷ್ಟಪಡಿಸಿದರು.