ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿನ ಪೋಷಕಾಂಶಗಳ ಕೊರತೆ ನೀಗಿಸಲು, ಅಪೌಷ್ಟಿಕತೆ ಸಮಸ್ಯೆಯನ್ನು ಹೋಗಲಾಡಿಸಲು ಎಲ್ಲ ಸರ್ಕಾರಗಳು ಶತಪ್ರಯತ್ನ ಮಾಡುತ್ತಿವೆ. ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿ ಅಂಗನವಾಡಿ ಕೇಂದ್ರಗಳ ಮೂಲಕ ಪೂರಕ ಪೋಷಕಾಂಶಗಳನ್ನು ಸಂಬಂಧ ಪಟ್ಟವರಿಗೆ ಪೂರೈಸುತ್ತಿವೆ.
ಅಪೌಷ್ಟಿಕತೆ ನಿರ್ಮೂಲನೆಗೆ ಕ್ರಮ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 1,850 ಅಂಗನವಾಡಿ ಕೇಂದ್ರಗಳಿವೆ. ಪ್ರತಿ ನಿತ್ಯ ಒಂದರಂತೆ ಮೊಟ್ಟೆ ಹಾಗೂ ಹಾಲಿನ ಪುಡಿಯನ್ನು ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ನೀಡಲಾಗುತ್ತಿದೆ. ಈ ಪೂರಕ ಪೋಷಕಾಂಶಗಳು ಯಾವುದೇ ಅಡೆತಡೆಗಳಿಲ್ಲದೇ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗಿ, ಬಳಿಕ ಅದನ್ನು ವಿತರಿಸುವ ಕಾರ್ಯ ಸುಗಮವಾಗಿ ನಡೆಯುತ್ತಿದೆ.
ದಾವಣಗೆರೆ ಜಿಲ್ಲೆಯಲ್ಲೂ ಅದೇನೇ ಸವಾಲುಗಳಿದ್ದರೂ ಕೂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ಪೋಷಕಾಂಶಗಳನ್ನು ಮನೆಬಾಗಿಲಿಗೆ ತಲುಪಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1,723 ಅಂಗನವಾಡಿಗಳ ಪೈಕಿ 1,11,327 ಮಕ್ಕಳು, 12,803 ಗರ್ಭಿಯರು, 12,069 ಬಾಣಂತಿಯರು ಜತೆಗೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸೇರಿದಂತೆ ಒಟ್ಟು 1,39,481 ಫಲಾನುಭವಿಗಳಿದ್ದಾರೆ. ಎಲ್ಲರಿಗೂ ಮೊಟ್ಟೆ ಹಾಲು ಸೇರಿದಂತೆ ಪೌಷ್ಟಿಕ ಆಹಾರವನ್ನು ಮನೆಗೆ ತಲುಪಿಸಲಾಗುತ್ತಿದೆ. ಈ ಕಾರ್ಯ ಸರಿಯಾಗಿ ನಡೆಯುತ್ತಿದೆಯೋ, ಇಲ್ಲವೋ ಎಂಬುದನ್ನು ತಿಳಿಯಲು ವಾಟ್ಸಾಪ್ ಗ್ರೂಪ್ ಕೂಡ ಮಾಡಲಾಗಿದೆಯಂತೆ. ಜಿಲ್ಲೆಯಲ್ಲಿ ಒಟ್ಟು 223 ಅಪೌಷ್ಟಿಕತೆಯಿಂದ ಕೂಡಿದ ಮಕ್ಕಳಿದ್ದು, ಅವರ ಸಮಸ್ಯೆ ನೀಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.
ಒಟ್ಟಿನಲ್ಲಿ ಅಪೌಷ್ಟಿಕತೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸರ್ಕಾರದ ಜೊತೆ ಸಂಬಂಧಪಟ್ಟ ಅಧಿಕಾರಿಗಳೂ ಕೂಡ ಕೈ ಜೋಡಿಸಿರೋದು ಶ್ಲಾಘನಾರ್ಹ. ಇದನ್ನು ಅರ್ಹ ಫಲಾನುಭವಿಗಳು ಸದುಪಯೋಗಪಡಿಸಿಕೊಂಡು ಅಪೌಷ್ಟಿಕತೆ ಸಮಸ್ಯೆಯನ್ನು ಹೊಡೆದೋಡಿಸಬೇಕಿದೆ.