ಕೊಪ್ಪಳ : ಯುವಕನನ್ನು ಕೊಲೆ ಮಾಡಿ ಶವ ಕೆರೆಗೆಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಕೊಪ್ಪಳ ಪೊಲೀಸರು ಸೆರೆ ಹಿಡಿದಿದ್ದಾರೆ. ಜಿಲ್ಲೆಯ ಕುಕನೂರು ತಾಲೂಕಿನ ತಳಬಾಳ ಸೀಮಾದಲ್ಲಿನ ಕೆರೆಯಲ್ಲಿ ಅಕ್ಟೋಬರ್ 4ರಂದು ಯುವಕನ ಶವ ಪತ್ತೆಯಾಗಿತ್ತು. ಪ್ರಕರಣ ಬೆನ್ನತ್ತಿದ ಪೊಲೀಸರು ಎರಡನೇ ಆರೋಪಿಯನ್ನು ಬಂಧಿಸಿದ್ದು, ಒಂದನೇ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪ್ರಕರಣದ ಹಿನ್ನೆಲೆ:ಡಂಬರಳ್ಳಿ ಗ್ರಾಮದ ಚಂದ್ರಗೌಡ ನಂದನಗೌಡ್ರ (30) ಎಂಬ ವ್ಯಕ್ತಿ ಸೆ. 29ರಂದು ಕಾಣೆಯಾದ ಬಗ್ಗೆ ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅ.4ರಂದು ಕುಕನೂರು ತಾಲೂಕಿನ ತಳಬಾಳ ಹತ್ತಿರದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಕುಕನೂರು ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ಕೈಗೊಂಡಾಗ ಚಂದ್ರಗೌಡ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ಎಸ್ಪಿ ಹೇಳಿದ್ದೇನು?: ಚಂದ್ರಗೌಡ ನಿಂಗನಗೌಡ ನಂದನಗೌಡ್ರ ಎಂಬ ವ್ಯಕ್ತಿಯನ್ನು ದುಷ್ಕರ್ಮಿಗಳು ಯಾವುದೋ ಉದ್ದೇಶದಿಂದ ಆತನ ತಲೆ ಮತ್ತು ಮುಖಕ್ಕೆ ಬಲವಾಗಿ ಹೊಡೆದು, ಕೊಲೆ ಮಾಡಿದ್ದಾರೆ. ಮೃತದೇಹದ ಬಲಗೈಗೆ ನೀಲಿ ಹಗ್ಗದಿಂದ ಕಲ್ಲು ಕಟ್ಟಿ ಕುಕನೂರು ತಾಲೂಕಿನ ತಳಬಾಳ ಸೀಮಾದ ಬಾವಿಯೊಂದರಲ್ಲಿ ಹಾಕಿ ಹೋಗಿದ್ದರು. ಈ ಪ್ರಕರಣ ಕುಕನೂರು ಠಾಣೆಯಲ್ಲಿ ದಾಖಲಾಗಿದ್ದು, ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ವಿವಿಧ ಆಯಾಮಗಳಿಂದ ಮಾಹಿತಿ ಸಂಗ್ರಹಿಸಿ, ಅ.11 ರಂದು ಎರಡನೇ ಆರೋಪಿ ಆಂಧ್ರಪ್ರದೇಶ ಮೂಲದ ಸುಧೀರ್ಕುಮಾರ್ ಶ್ರೀಹರಿ ಮಾನಕೊಂಡ ಎಂಬಾತನನ್ನು ಬಂಧಿಸಲಾಗಿದೆ. ಮೊದಲ ಆರೋಪಿ ಮತ್ತು ಕೊಲೆಯಾದ ಚಂದ್ರಗೌಡನ ನಡುವೆ ಹಣಕಾಸಿನ ವಿಷಯವಾಗಿ ವೈಮನಸ್ಸಿದ್ದು, ಕೊಲೆ ಬಗ್ಗೆ ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ. ಪ್ರಕರಣದ ಒಂದನೇ ಆರೋಪಿಯ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ತಿಳಿಸಿದರು.