ಕೊಪ್ಪಳ:ಯುವಕನೋರ್ವ ತನ್ನದೆಯಾದ ಆಸಕ್ತಿದಾಯಕ ದಾರಿ ಹುಡುಕುವಲ್ಲಿ ಯಶಕಂಡಿದ್ದಾನೆ. ಡಿಪ್ಲೋಮಾ ವ್ಯಾಸಂಗ ಮಾಡಿದ್ದ ಆ ಯುವಕ ಕೃಷಿಯಲ್ಲಿ ಏನಾದರೂ ಸಾಧಿಸಬೇಕು ಎಂದು ನಿರ್ಧಾರ ಮಾಡಿ ಮೊದಲ ವರ್ಷದಲ್ಲಿಯೇ ಯಶಸ್ಸು ಕಂಡಿದ್ದಾನೆ. ಎರಡೂವರೆ ಎಕರೆ ಪ್ರದೇಶದಲ್ಲಿ ಪೇರಲ ಬೆಳೆದ ಆ ಯುವಕ ಉತ್ತಮ ಇಳುವರಿ ತೆಗೆದಿದ್ದಾನೆ. ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಹೌದು, ತಾಲೂಕಿನ ನಾಗೇಶನಹಳ್ಳಿ ಗ್ರಾಮದ ಯುವಕ ಹರೀಶ ಪೇರಲ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಅದರಲ್ಲೇನು ವಿಶೇಷ ಎಂದುಕೊಳ್ಳಬೇಡಿ. ವಿಶೇಷತೆ ಇದೆ. ಡಿಪ್ಲೋಮಾ ಮಾಡಿರುವ ಯುವಕ ಹರೀಶ, ಕೃಷಿಯಲ್ಲಿ ಏನಾದರೂ ಸಾಧಿಸಬೇಕು ಎಂದುಕೊಂಡು ಕುಟುಂಬದವರ ಸಾಂಪ್ರದಾಯಿಕ ಕೃಷಿಯನ್ನು ಕೈಬಿಟ್ಟು ತಮ್ಮದೇ ಯೋಚನೆ ಮತ್ತು ಯೋಜನೆಯಂತೆ ಕೃಷಿಯಲ್ಲಿ ತೊಡಗಿಕೊಂಡು ಯಶ ಕಾಣುತ್ತಿದ್ದಾರೆ. ತಮ್ಮ ಜಮೀನನ್ನು ಸಮತಟ್ಟು ಮಾಡಿಸಿ, ಬೋರ್ವೆಲ್ ಕೊರೆಸಿ ಪೇರಲ ಬೆಳೆದು ಸಕ್ಸಸ್ ಕಂಡಿದ್ದಾರೆ.
ಕಳೆದ ವರ್ಷ ಎರಡೂವರೆ ಎಕರೆಯಲ್ಲಿ ತೈವಾನ್ ಪಿಂಕ್ ತಳಿಯ 2400 ಪೇರಲ ಸಸಿಗಳನ್ನು ನಾಟಿ ಮಾಡಿದ್ದ ಹರೀಶ ಈಗ ಉತ್ತಮ ಫಸಲು ತೆಗೆಯುತ್ತಿದ್ದಾರೆ. ಈಗಾಗಲೇ ಸುಮಾರು 3 ಟನ್ಗೂ ಅಧಿಕ ಪೇರಲ ಕಾಯಿ/ಹಣ್ಣುಗಳನ್ನು ಇಳುವರಿ ತೆಗೆದಿದ್ದಾರೆ. ಸ್ಥಳೀಯವಾಗಿ ಪ್ರತಿ ಕೆಜಿಗೆ 30 ರೂ. ದರದಲ್ಲಿ ಪೇರಲ ಮಾರಾಟ ಮಾಡಿದ್ದಾರೆ. ಒಂದೊಂದು ಗಿಡದಲ್ಲಿ ಸುಮಾರು 10 ಕೆಜಿಯಷ್ಟು ಪೇರಲ ಕಾಯಿಗಳು ಇದ್ದು ಮುಂದೆ ಇನ್ನೂ ಉತ್ತಮ ಆದಾಯ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಯುವಕ ಹರೀಶ್.
ಮೊದಲಿನಿಂದಲೂ ನನಗೆ ಕೃಷಿಯಲ್ಲಿ ತುಂಬಾ ಆಸಕ್ತಿ. ಡಿಪ್ಲೋಮಾ ಮುಗಿದ ಬಳಿಕ ಒಂದಿಷ್ಟು ದಿನ ಸುಮ್ಮನೆ ಇದ್ದೆ. ಮನೆಯಲ್ಲಿ ಬ್ಯುಸಿನೆಸ್ ಮಾಡಲು ಹೇಳಿದರು. ಆದರೆ, ನನಗೆ ಕೃಷಿಯ ಕಡೆ ಒಲವು ಇದ್ದಿದ್ದರಿಂದ ನಮ್ಮ ಜಮೀನಿನ ಪೈಕಿ ಎರಡೂವರೆ ಎಕರೆಯಲ್ಲಿ ಪೇರಲ ಬೆಳೆಯಲು ನಿರ್ಧರಿಸಿದೆ. ಕಳೆದ ವರ್ಷ ಸಸಿ ನಾಟಿ ಮಾಡಿದೆ. ಇದಕ್ಕೂ ಮೊದಲು ಕೃಷಿಗೆ ಬೇಕಾದ ಪೂರಕ ಸಿದ್ಧತೆಗಳನ್ನು ಮಾಡಿಕೊಂಡಿದ್ದೆ. ಬಳಿಕ ಪೇರಲ ಸಸಿ ನಾಟಿ ಮಾಡಿದೆ. ಆರಂಭದಲ್ಲಿ ನಿರ್ಹವಣೆಯ ವೆಚ್ಚ ತುಸು ಜಾಸ್ತಿ ಅನಿಸಿತು. ಆದರೆ, ಎರಡನೇ ವರ್ಷ ವೆಚ್ಚ ತಗ್ಗಿತು. ಮೊದಲ ವರ್ಷದಲ್ಲಿಯೇ ಈಗ ಉತ್ತಮ ಇಳುವರಿ ಬಂದಿದೆ. ಇಳುವರಿ ಕಂಡು ತುಂಬಾ ಖುಷಿ ಅನಿಸುತ್ತಿದೆ. ಕೃಷಿಯಲ್ಲಿ ಒಂದಿಷ್ಟು ನಮ್ಮದೆಯಾದ ಯೋಜನೆ, ಯೋಚನೆಗಳ ಮೂಲಕ ಬೆಳೆಗಳನ್ನು ಬೆಳೆದರೆ ಯಶಸ್ಸು ಕಾಣಬಹುದು. ಅಲ್ಲದೆ, ಕೃಷಿಯಲ್ಲಿಯೂ ಬದುಕು ಕಟ್ಟಿಕೊಂಡು ನೆಮ್ಮದಿಯಾಗಿರಬಹುದು ಎನ್ನುವುದಕ್ಕೆ ನಾನೇ ಉದಾರಹಣೆ ಎನ್ನುತ್ತಾರೆ ಸಾಧಕ ಹರೀಶ.
ಡಿಪ್ಲೋಮಾ ವ್ಯಾಸಂಗದ ಜೊತೆಗೆ ಮನೆಯಲ್ಲಿ ಬೇರೆ ಬ್ಯುಸಿನೆಸ್ ಮಾಡಲು ಅವಕಾಶಗಳಿದ್ದರೂ ಸಹ ಅತ್ತ ಮನಸು ಮಾಡದ ಹರೀಶ, ತಮ್ಮದೇ ಯೋಜನೆಯಂತೆ ಕೃಷಿಯಲ್ಲಿ ತೊಡಗಿಕೊಂಡು ಯಶಸ್ಸು ಕಾಣುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.
ಕೃಷಿಯಲ್ಲಿ ಖುಷಿ ಕಂಡ ಡಿಪ್ಲೋಮಾ ಪದವೀಧರ