ಕೊಪ್ಪಳ:ಆನ್ಲೈನ್ ಶಿಕ್ಷಣಕ್ಕೆ ಬೇಕಾದ ಮೊಬೈಲ್ ಕೊಡಿಸಲಾಗದೆ ಅನೇಕ ಪಾಲಕರು ಕೈಚೆಲ್ಲಿ ಕುಳಿತಿದ್ದಾರೆ. ಹೆತ್ತವರ ಕಷ್ಟ ನೋಡಿಕೊಂಡು ಮಕ್ಕಳು ಸಹ ಮೊಬೈಲ್ ಇಲ್ಲದಿದ್ದರೂ ಪರವಾಗಿಲ್ಲ ಎಂದು ಸುಮ್ಮನೆ ಇರುವಂತಾಗಿದೆ. ಆದರೆ ಇಂತಹ ಸನ್ನಿವೇಶಗಳಲ್ಲಿ ಕೆಲ ವಿದ್ಯಾರ್ಥಿಗಳು ತಾವೇ ಕೆಲಸ ಮಾಡಿ ಮೊಬೈಲ್ ತೆಗೆದುಕೊಂಡು ತರಗತಿಗೆ ಹಾಜರಾಗಿರುವ ನಿದರ್ಶನಗಳಿವೆ.
ಅದರಂತೆ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಗ್ರಾಮದ ವೀರೇಶ ಚರಂತಿಮಠ ಎಂಬ ವಿದ್ಯಾರ್ಥಿ ತನ್ನ ಆನ್ಲೈನ್ ಶಿಕ್ಷಣಕ್ಕೆ ಬೇಕಾದ ಮೊಬೈಲ್ ತೆಗೆದುಕೊಳ್ಳಲು ಕೂಲಿ ಕೆಲಸ ಮಾಡಿದ್ದಾನೆ.
ಬಾಲಕನಿಗೆ ಆನ್ಲೈನ್ ಮೂಲಕ ತರಗತಿಗೆ ಹಾಜರಾಗಬೇಕಾದರೆ ಮೊಬೈಲ್ ಅಗತ್ಯವಾಗಿತ್ತು. ಆದರೆ ಕುಟುಂಬ ಆರ್ಥಿಕವಾಗಿ ಸದೃಢವಾಗಿಲ್ಲ. ಹೀಗಾಗಿ ತಾನೇ ದುಡಿದು ಮೊಬೈಲ್ ತೆಗೆದುಕೊಳ್ಳಲು ಲಾಕ್ಡೌನ್ ಅವಧಿಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಈ ಮೂಲಕ ಸುಮಾರು 20 ಸಾವಿರ ರೂ. ಸಂಪಾದಿಸಿ ಅದರಲ್ಲಿ 10 ಸಾವಿರ ರೂಪಾಯಿ ಕೊಟ್ಟು ಮೊಬೈಲ್ ಖರೀದಿಸಿದ್ದಾನೆ.
ಮೊಬೈಲ್ಗಾಗಿ ಕೂಲಿ ಕೆಲಸ ಮಾಡಿದ ಬಾಲಕ ವೀರೇಶ ಚರಂತಿಮಠ "ತಂದೆ-ತಾಯಿ ಬಡವರಾಗಿರುವುದರಿಂದ ಮೊಬೈಲ್ ಕೊಡಿಸಲು ಆಗದ ಸ್ಥಿತಿ ನೋಡಿ ನಾನೂ ಹೊಲದ ಕೆಲಸಗಳಲ್ಲಿ ಕೂಲಿ ಮಾಡಿ ಹಣ ಸಂಪಾದಿಸಿ ಮೊಬೈಲ್ ತೆಗೆದುಕೊಂಡಿದ್ದೇನೆ. ಸಂಪಾದಿಸಿದ ಹಣದಲ್ಲಿ ಮೊಬೈಲ್ ತೆಗೆದುಕೊಂಡು, ಉಳಿದ ಹಣವನ್ನು ಕುಟುಂಬ ನಿರ್ವಹಣೆಗೆ ನೀಡಿದ್ದೇನೆ" ಎಂದು ಬಾಲಕ ವೀರೇಶ್ ಚರಂತಿಮಠ ಹೇಳುತ್ತಾನೆ.
ಇನ್ನು ಇಂತಹ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೇಕಾದ ಅಗತ್ಯ ಸಹಾಯವನ್ನು ಸರ್ಕಾರ ಮಾಡಬೇಕು ಎಂದು ಸ್ಥಳೀಯ ಯುವಕ ಪ್ರಭುಸ್ವಾಮಿ ಗೊಂಡಬಾಳ ಆಗ್ರಹಿಸಿದ್ದಾರೆ.