ಗಂಗಾವತಿ: ತಾನು ಖರೀದಿಸಿದ ಹೊಲದಲ್ಲಿ ಬೆಳೆದ ಮೊದಲ ಬೆಳೆಯನ್ನು ಸರ್ವ ಸಮುದಾಯಕ್ಕೆ ಸಲ್ಲಬೇಕು ಎಂಬ ವಿಶಾಲ ಮನೋಭಾವನೆ ಹೊಂದಿರುವ ಮುಸ್ಲಿಂ ರೈತರೊಬ್ಬರು, ಜಾತಿ - ಮತ - ಪಂಥಗಳ ಬೇಧವಿಲ್ಲದೇ ನಿತ್ಯ ತ್ರಿವಿಧ ದಾಸೋಹ ನಡೆಸುವ ಕೊಪ್ಪಳದ ಗವಿಮಠಕ್ಕೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ನಗರದ ಉಳ್ಳಿಡಗ್ಗಿಯ ನಿವಾಸಿ ಮೆಹಬೂಬ್ ಪಾಷಾ ಎಂಬ ಯುವಕ ಕನಕಗಿರಿ ಸಮೀಪದ ಲಕ್ಕುಂಪಿ ಗ್ರಾಮದ ಬಳಿ ಇತ್ತೀಚೆಗೆ ಮೂರು ಎಕರೆ ಹೊಲ ಖರೀದಿಸಿದ್ದರು. ಇದರಲ್ಲಿ ಒಂದು ಎಕರೆ ನಿರುಪಯುಕ್ತ ಭೂಮಿ ಇದ್ದು, ಕೇವಲ ಎರಡು ಎಕರೆಯಲ್ಲಿ ಸಜ್ಜೆ ಬಿತ್ತನೆ ಮಾಡಿದ್ದರು. ಎರಡು ಎಕರೆಯಿಂದ ಒಟ್ಟು 16 ಕ್ವಿಂಟಾಲ್ ಸಜ್ಜಿ ಬೆಳೆದಿದ್ದಾರೆ. ತನ್ನ ಹೊಲದಲ್ಲಿ ಬೆಳೆದಿದ್ದ ಮೊದಲ ಸಜ್ಜೆ ಧಾನ್ಯವನ್ನು ಸಮಾಜಕ್ಕೆ ಅರ್ಪಿಸುವ, ಮುಖ್ಯವಾಗಿ ಒಳ್ಳೆಯ ಕಾರ್ಯಕ್ಕೆ ಬಳಕೆಯಾಗಬೇಕು ಎಂಬ ಉದ್ದೇಶ ಯುವಕ ಹೊಂದಿದ್ದ.