ಗಂಗಾವತಿ (ಕೊಪ್ಪಳ): ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರ ಹಾಗೂ ಗಂಗಾವತಿ ತಾಲೂಕಿನ ಪ್ರಮುಖ ಪಟ್ಟಣ ಶ್ರೀರಾಮನಗರಕ್ಕೆ ರೈಲ್ವೆ ಸೇವೆಯೇನೋ ಬಂದಿದೆ. ನಿತ್ಯ ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಸಂಚರಿಸುವ ಹಲವು ರೈಲುಗಳು ಶ್ರೀರಾಮನಗರದ ನಿಲ್ದಾಣದ ಮೂಲಕ ಸಂಚರಿಸುತ್ತಿವೆ. ಆದರೆ ನಿಲ್ದಾಣಕ್ಕೆ ಹೋಗಲು ಇರುವ ರಸ್ತೆಯ ಮಾರ್ಗವನ್ನೇ ಒಬ್ಬ ರೈತ ಜೆಸಿಬಿ ಮೂಲಕ ಅಗೆದು ಗುಂಡಿ ತೋಡಿ ಯಾರೊಬ್ಬರೂ ಓಡಾದಂತೆ ಮಾಡಿದ್ದು, ನೂರಾರು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಹೀಗಾಗಿ ಗ್ರಾಮಕ್ಕೆ ರೈಲು ಸೇವೆ ಇದ್ದರೂ ಇಲ್ಲದಂತಾಗಿದೆ.
ಬಡ ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅತ್ಯಲ್ಪ ವೆಚ್ಚದಲ್ಲಿ ಓಡಾಡಲು ಅನುಕೂಲವಾಗಿದ್ದ ರೈಲು ಪ್ರಯಾಣ ಸೌಲಭ್ಯ ಇದೀಗ ರೈತನ ಈ ಕೆಲಸದಿಂದ ಇದ್ದೂ ಇಲ್ಲದಂತಾಗಿದೆ. ರೈಲ್ವೆ ಇಲಾಖೆ ತನ್ನ ಭೂಮಿಯನ್ನು ನಾಗರಿಕ ಸೌಲಭ್ಯದ ಉದ್ದೇಶಕ್ಕಾಗಿ ಸ್ವಾಧೀನ ಪಡಿಸಿಕೊಂಡಿದ್ದು, ಪರಿಹಾರ ನೀಡಿಲ್ಲ ಎಂದು ರೈತ ಈಗಾಗಲೇ ತನ್ನ ಹೊಲದ ರಸ್ತೆಯನ್ನು ಮುಚ್ಚಿದ್ದಾನೆ. ಜನ ರೈಲ್ವೆ ನಿಲ್ದಾಣಕ್ಕೆ ಪರ್ಯಾಯ ರಸ್ತೆ ಮೂಲಕ ಹೋಗುತಿದ್ದರು. ಇದೀಗ ಆ ರಸ್ತೆಯನ್ನೂ ರೈತ ಹಾಳು ಮಾಡಿದ್ದಾನೆ.