ಕೊಪ್ಪಳ :ಕುಷ್ಟಗಿಯ ಹಳೆ ಬಜಾರ ನಿವಾಸಿ ರೈತ ಕಾಶಪ್ಪ ಚಟ್ಟೇರ್ ಎಂಬುವರು ಗಜೇಂದ್ರಗಡ ರಸ್ತೆಯಲ್ಲಿರುವ ಜಮೀನಿನ 4 ಎಕರೆ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ತುಳಸಿ ಬೆಳೆದಿದ್ದಾರೆ. ತುಳಸಿ ಬೆಳೆಯಿಂದ ಒಳ್ಳೆ ಸಂಪಾದನೆ ಮಾಡಬಹುದು ಎಂಬುದನ್ನು ನಿರೂಪಿಸಿದ್ದಾರೆ.
ಬಹು ಔಷಧಿ ಗುಣಗಳ ಈ ಸಸ್ಯ ಮಳೆಯಾಶ್ರಿತ ಹಾಗೂ ನೀರಾವರಿ ಮೂಲಕವೂ ಬೆಳೆಯಬಹುದಾಗಿದೆ. ಹವಾಮಾನಕ್ಕೆ ಹೊಂದಿಕೊಂಡು ಇದನ್ನು ಬೆಳೆಯಬಹುದಾಗಿದೆ. ಮಳೆಯಾಶ್ರಿತವಾದರೆ ವರ್ಷಕ್ಕೆ ಒಂದೇ ಬೆಳೆ. ನೀರಾವರಿಯಾದರೆ ಒಮ್ಮೆ ನಾಟಿ ಮಾಡಿದರೆ ಮೂರು ವರ್ಷದವರೆಗೂ ಬೆಳೆಯಬಹುದು.
ಮೂಲತಃ ಔಷಧಿ ಸಸ್ಯವಾಗಿದ್ದರಿಂದ ಇದಕ್ಕೆ ಯಾವೂದೇ ರೋಗ, ಕೀಟ ಬಾಧೆ ಇಲ್ಲದೇ ಬೆಳೆಯಬಹುದು. ರೈತರ ಖರ್ಚು ಉಳಿಸುವ ಬೆಳೆ ಇದಾಗಿದೆ. ತುಳಸಿ ಬೀಜದಿಂದ ನರ್ಸರಿಯಲ್ಲಿ ಸಸಿ ಮಾಡಿ ಒಂದೂವರೆ ತಿಂಗಳಿನಲ್ಲಿ ನಾಟಿ ಮಾಡಬಹುದು. 40 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ.
ಬರೋಬ್ಬರಿ 4 ಎಕರೆಯಲ್ಲಿ ತುಳಸಿ ಬೆಳೆದು ಒಳ್ಳೆ ಲಾಭ ಮಾಡ್ತಿರೋ ಮಾದರಿ ರೈತ.. ಪ್ರತಿ ಎರಡು ತಿಂಗಳಿಗೊಮ್ಮೆ ಕಟಾವು ಮಾಡಿ ನೆರಳಿನಲ್ಲಿ ಒಣಗಿಸಬೇಕು. ಒಣಗಿದ ಬಳಿಕ ಎಲೆ ಹಾಗೂ ಕಡ್ಡಿಗಳನ್ನು ಬೇರ್ಪಡಿಸಬೇಕು. ಹಸಿರು ಬಣ್ಣದ ಒಣಗಿದ ಎಲೆಗಳಿಗೆ ಬೆಲೆ ಇದೆ. ಕಪ್ಪಾದರೆ ಬೆಲೆ ಇರುವುದಿಲ್ಲ. ಪ್ರತಿ ಕ್ವಿಂಟಲ್‌ಗೆ 10 ಸಾವಿರ ರೂ. ಧಾರಣಿಯಲ್ಲಿ ಆಯುರ್ವೇದಿಕ್ ಕಂಪನಿಗಳು ಖರೀದಿಸುತ್ತವೆ ಎನ್ನುತ್ತಾರೆ ರೈತ ಕಾಶಪ್ಪ ಚಟ್ಟೇರ್.
ಈ ಬೆಳೆ ಯಾವೂದೇ ಜಮೀನಿನಲ್ಲಿ ಬೆಳೆಯಬಹುದಾಗಿದ್ದು, ಪ್ರತಿ ಎರಡು ಅಡಿಗೆ ಒಂದರಂತೆ ನಾಟಿ ಮಾಡಬೇಕು. ತಿಪ್ಪೆಗೊಬ್ಬರ ಹಾಗೂ ನೀರಾವರಿ ಕ್ಷೇತ್ರದಲ್ಲಿ ಸಕಾಲಿಕ ನೀರು ನಿರ್ವಹಣೆ, ಕಳೆ ತೆಗೆಸುವುದರಿಂದ ಉತ್ತಮ ಬೆಳೆ ನಿರೀಕ್ಷಿಸಬಹುದಾಗಿದೆ. ಇದರಿಂದ ಒಳ್ಳೆಯ ಆದಾಯವೂ ಇದೆ ಎಂಬುದನ್ನು ರೈತ ಕಾಶಪ್ಪ ನಿರೂಪಿಸಿದ್ದಾರೆ.