ಗಂಗಾವತಿ (ಕೊಪ್ಪಳ):ಪಿರಾಮಿಡ್ ಮಾದರಿಯಲ್ಲಿ ರಚಿತವಾಗಿರುವ ಪಿರಾಂಮಿಕ್ಸ್ ಕ್ಯೂಬ್ನ ನಾನಾ ಬಣ್ಣಗಳನ್ನು ಬದಲಿಸಿ ಕೇವಲ ಒಂದು ನಿಮಿಷದಲ್ಲಿ ಮತ್ತೆ ಒಂದೇ ಬಣ್ಣಕ್ಕೆ ತರುವ ಪಜಲ್ ಅನ್ನು ಬಿಡಿಸುವ ಮೂಲಕ 999 ಮಕ್ಕಳು ಏಕಕಾಲಕ್ಕೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಗೆ ಭಾಜನರಾದರು. ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಈ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಸ್ಪರ್ಧೆಯಲ್ಲಿ ಸಂಸ್ಥೆಯ ಆಯೋಜಕರು ಮಕ್ಕಳಿಗೆ ಕೇವಲ ಒಂದು ನಿಮಿಷದಲ್ಲಿ ಪಜಲ್ ಬಿಡಿಸುವ ಸವಾಲು ನೀಡಿದ್ದರು.
ಪಿರಾಮಿಡ್ ಕ್ಯೂಬ್ ಸವಾಲು ಬಿಡಿಸಿ ವಿಶ್ವ ದಾಖಲೆ: ಶಾಲೆಯ ಐದನೇ ತರಗತಿಯಿಂದ ಹತ್ತನೇ ತರಗತಿವರೆಗಿನ 999 ಮಕ್ಕಳು ಏಕಕಾಲಕ್ಕೆ ಶಾಲೆಯ ಮೈದಾನದಲ್ಲಿ ಸೇರಿ ಕೇವಲ ಒಂದು ನಿಮಿಷಕ್ಕೂ ಮುನ್ನವೇ ಕ್ಯೂಬ್ನಲ್ಲಿ ಚದುರಿದ್ದ ವಿವಿಧ ಬಣ್ಣಗಳನ್ನು ಬದಲಿಸಿ ಒಂದು ಮಗ್ಗುಲಲ್ಲಿ ಕೇವಲ ಒಂದೇ ಬಣ್ಣ ಬರುವ ರೀತಿಯಲ್ಲಿ ಪಿರಾಮಿಡ್ ಕ್ಯೂಬ್ ಸವಾಲು ಬಿಡಿಸಿ ವಿಶ್ವ ದಾಖಲೆ ಬರೆದರು.
13ಕ್ಕೂ ಹೆಚ್ಚು ಶಿಕ್ಷಕರ ನಿಯೋಜನೆ: ಒಂದೊಂದು ಗುಂಪಿನಲ್ಲಿ ತಲಾ 223 ಮಕ್ಕಳಂತೆ ಒಟ್ಟು ನಾಲ್ಕು ಗುಂಪಿನಲ್ಲಿ ಸೇರಿಸಿ ಪಿರಾಮಿಡ್ ಮಾದರಿಯಲ್ಲಿಯೇ ಶಾಲಾ ಮೈದಾನದಲ್ಲಿ ಕೂರಿಸಲಾಗಿತ್ತು. ಹೆಚ್ಚುವರಿ 158 ಮಕ್ಕಳನ್ನು ಮತ್ತೊಂದು ಸಾಲಿನಲ್ಲಿ ನಿಲ್ಲಿಸಲಾಗಿತ್ತು. ಹೀಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ನಲ್ಲಿ ಭಾಗಿಯಾಗಲು ಒಟ್ಟು 1050 ಮಕ್ಕಳು ಆ ಮಕ್ಕಳ ಮೇಲೆ ನಿಗಾ ಇಡಲು ಶಾಲೆಯ 13ಕ್ಕೂ ಹೆಚ್ಚು ಶಿಕ್ಷಕರನ್ನು ನಿಯೋಜಿಸಲಾಗಿತ್ತು. ಕ್ಯೂಬ್ನಲ್ಲಿರುವ ಬಣ್ಣಗಳನ್ನು ಚದುರಿಸಲು ಮೊದಲಿಗೆ ಸಂಘಟಕರು ಸೂಚನೆ ನೀಡಿದರು.
ವರ್ಲ್ಡ್ ಬುಕ್ ಆಫ್ ರೆಕಾರ್ಡರ್ನಲ್ಲಿ ದಾಖಲೆ: ಬಳಿಕ ಲೈವ್ ವಿಡಿಯೋ ಮೂಲಕ ಮಕ್ಕಳಿಗೆ ಒಂದು ನಿಮಿಷದಲ್ಲಿ ಬಣ್ಣಗಳನ್ನು ಒಗ್ಗೂಡಿಸುವ ಸವಾಲು ನೀಡಲಾಯಿತು. ಮಕ್ಕಳು ತಮ್ಮ ಕ್ರೀಯಾಶೀಲತೆ ಮೆರೆದು ಕೇವಲ 57 ಸೆಕೆಂಡ್ಗಳಲ್ಲಿ ಗುರಿ ತಲುಪುವ ಮೂಲಕ ವರ್ಲ್ಡ್ ಬುಕ್ ಆಫ್ ರೆಕಾರ್ಡರ್ನಲ್ಲಿ ದಾಖಲೆ ಬರೆದರು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಕೆಲ ಮಕ್ಕಳು ಕೇವಲ 15-17 ಸೆಕೆಂಡ್ಗಳಲ್ಲಿ ಸವಾಲಿನ ಗುರಿ ತಲುಪಿದರು.