ಕೊಪ್ಪಳ: ಕರ್ತವ್ಯಲೋಪ, ಹಣ ದುರ್ಬಳಕೆ ಹಾಗೂ ಅನಧಿಕೃತ ಗೈರಾದ ಆರೋಪದಡಿ ಜಿಲ್ಲೆಯ 8 ಗ್ರಾಮ ಪಂಚಾಯಿತಿಗಳ ಪಿಡಿoಗಳನ್ನು ಅಮಾನತು ಮಾಡಿ ಸಿಇಒ ರಘುನಂದನ್ ಮೂರ್ತಿ ಆದೇಶ ಹೊರಡಿಸಿದ್ದಾರೆ.
ಕೋವಿಡ್ ನಿಯಂತ್ರಣ ಸಂಬಂಧ ಇದೇ ಏಪ್ರಿಲ್ 15ರಂದು ಡಿಸಿ ವಿಕಾಸ್ ಕಿಶೋರ್ ನೇತೃತ್ವದಲ್ಲಿ ನಡೆದಿದ್ದ ಸಭೆಗೆ ಈ ಎಂಟು ಪಿಡಿಒಗಳು ಗೈರಾಗಿದ್ದರು.
ಕೊಪ್ಪಳ ತಾಲೂಕಿನ ಮಾದಿನೂರು, ಅಗಳಕೇರಾ ಗ್ರಾಮ ಪಂಚಾಯಿತಿ ಪಿಡಿಒ ಬಸವರಾಜ ಕಿರ್ದಿ, ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮ ಪಂಚಾಯಿತಿ ಪಿಡಿಒ ಜಮಾಲಸಾಬ, ಕುಕನೂರು ತಾಲೂಕು ಯರೇಹಂಚಿನಾಳ ಗ್ರಾಮ ಪಂಚಾಯಿತಿ ಪಿಡಿಒ ಮಹೇಶ್ ಗೌಡ, ಕುಷ್ಟಗಿ ತಾಲೂಕು ಕೇಸೂರು ಗ್ರಾಮ ಪಂಚಾಯಿತಿಯ ನಾಗರತ್ನ, ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮ ಪಂಚಾಯಿತಿ ಪಿಡಿಒ ಬಿ.ಕೃಷ್ಣಾ ರೆಡ್ಡಿಯನ್ನು ಅಮಾನತುಗೊಳಿಸಲಾಗಿದೆ.
ಇನ್ನು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಕೈಪಿಡಿಯನ್ವಯ ನಿವೇಶನದಾರರಿಗೆ ಮೂಲ ಸೌಕರ್ಯ ಒದಗಿಸದೆ ಶೇಕಡಾ 40ರಷ್ಟು ಬಾಕಿ ಉಳಿದ ನಿವೇಶನಗಳಿಗೆ ನಮೂನೆ 9 ಹಾಗೂ 11 ನೀಡಿ ಸರ್ಕಾರದ ಆದೇಶ ಉಲ್ಲಂಘಿಸಿ ಕರ್ತವ್ಯಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಕೊಪ್ಪಳ ತಾಲೂಕಿನ ಮತ್ತೂರು ಗ್ರಾಮ ಪಂಚಾಯಿತಿ ಪಿಡಿಒ ಸೋಮಶೇಖರ್, ಕರ್ತವ್ಯಕ್ಕೆ ಅನಧಿಕೃತವಾಗಿ ಗೈರಾದ ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮ ಪಂಚಾಯಿತಿ ಪಿಡಿಒ ಪ್ರಕಾಶ ಸಜ್ಜನ್ ಹಾಗೂ 14 ಮತ್ತು 15ನೇ ಹಣಕಾಸು ಯೋಜನೆಯಡಿ ಹಣ ದುರ್ಬಳಕೆ ಮಾಡಿಕೊಂಡ ಆರೋಪದಡಿ ಕೊಪ್ಪಳ ತಾಲೂಕಿನ ಅಗಳಕೇರಾ ಗ್ರಾಮ ಪಂಚಾಯಿತಿಯ ಹಿಂದಿನ ಪಿಡಿಒ ಗೌಸುಸಾಬ್ ಎಂ. ಮುಲ್ಲಾ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನ್ ಮೂರ್ತಿ ಸಸ್ಪೆಂಡ್ ಮಾಡಿದ್ದಾರೆ.