ಕೊಪ್ಪಳ:ಜಿಲ್ಲೆಯಲ್ಲಿ ಇಂದು ಒಟ್ಟು 8 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಕೊಪ್ಪಳ ಜಿಲ್ಲಾಡಳಿತ, ಜಿಲ್ಲೆಯಲ್ಲಿ ಹೊಸದಾಗಿ ಐವರು ಪುರುಷರು ಹಾಗೂ ಮೂವರು ಮಹಿಳೆಯರು ಸೇರಿ ಒಟ್ಟು 8 ಜನರಿಗೆ ಸೋಂಕು ತಗುಲಿರೋದು ದೃಢಫಟ್ಟಿದೆ ಎಂದು ತಿಳಿಸಿದೆ.
ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 41ಕ್ಕೆ ಏರಿದಂತಾಗಿದೆ. ಜಿಲ್ಲೆಯ ಕುಕನೂರು (ಯಲಬುರ್ಗಾ) ತಾಲೂಕಿನ ತಳಕಲ್ ಗ್ರಾಮದ 29 ವರ್ಷದ ಪುರುಷ ಹಾಗೂ 21 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಇವರು ಆಂಧ್ರಪ್ರದೇಶದ ಗದ್ವಾಲದಿಂದ ಜೂನ್ 18ರಂದು ತಳಕಲ್ಗೆ ಬಂದಿದ್ದರು.
ಸೋಂಕಿನ ಲಕ್ಷಣಗಳು ಇಲ್ಲದಿದ್ದರೂ ಪಾಸಿಟಿವ್ ಬಂದಿದೆ. ಇನ್ನು ಕುಷ್ಟಗಿ ತಾಲೂಕಿನ ಪುರ ಗ್ರಾಮದ 40 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಈ ಮಹಿಳೆಗೆ ಸೋಂಕು ತಗುಲಿದ್ದು ಆತಂಕಕ್ಕೆ ಕಾರಣವಾಗಿದೆ. ಇನ್ನು ಕುಷ್ಟಗಿ ಪಟ್ಟಣದ 20 ವರ್ಷದ ಯುವಕನಿಗೆ ಸೋಂಕು ತಗುಲಿದೆ. ಬಾಗಲಕೋಟೆ ಜಿಲ್ಲೆಯ ಟ್ರಾವೆಲ್ ಹಿಸ್ಟರಿ ಈತನಿಗೆ ಇದೆ.