ಗಂಗಾವತಿ: ನಗರದ ಎಪಿಎಂಸಿ ಗೋದಾಮಿನ ಮೇಲೆ ದಾಳಿ ಮಾಡಿದ ಕೃಷಿ ಹಾಗೂ ಪೊಲೀಸ್ ಅಧಿಕಾರಿಗಳು 500ಕ್ಕೂ ಹೆಚ್ಚು ಕಲಬೆರಕೆ ಯೂರಿಯಾ ರಸಗೊಬ್ಬರವನ್ನು ವಶಪಡಿಸಿಕೊಂಡ ಬೆನ್ನಲ್ಲೇ ಇದೇ ತಂಡದಿಂದ ವಿತರಿಸಲಾಗಿದ್ದ ಇನ್ನೂ 575 ಚೀಲ ಕಲಬೆರಕೆ ಯೂರಿಯಾ ಗೊಬ್ಬರವನ್ನು ವಶಕ್ಕೆ ಪಡೆಯಲಾಗಿದೆ.
ಗಂಗಾವತಿ: 575 ಚೀಲ ಕಲಬೆರಕೆ ಯೂರಿಯಾ ರಸಗೊಬ್ಬರ ವಶ - ಗಂಗಾವತಿ
ಗಂಗಾವತಿ ಗೋದಾಮಿನಿಂದ ಮಸ್ಕಿ ತಾಲೂಕಿನಲ್ಲಿ ವಿತರಿಸಲಾಗಿದ್ದ 575 ಚೀಲ ಕಲಬೆರಕೆ ರಸಗೊಬ್ಬರವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಗಂಗಾವತಿಯ ಗೋದಾಮಿನಲ್ಲಿ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುವ ಕೋರಮಂಡಲ್ ಕಂಪನಿಯ ಗ್ರೋ ಪ್ಲಸ್ ಯೂರಿಯಾವನ್ನು ಮಂಗಳ ಕಿಸಾನ್ ಡಿಎಪಿ ಯೂರಿಯಾ ಚೀಲದಲ್ಲಿ ತುಂಬಿ ರೈತರಿಗೆ ಮಾರಾಟ ಮಾಡುವ ಮೂಲಕ ವಂಚಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು, ಲಾರಿ ಚಾಲಕ ಸೇರಿದಂತೆ ಮತ್ತಿಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಅಲ್ಲದೆ ಇದೇ ಗೋದಾಮಿನಿಂದ ಮಸ್ಕಿ ತಾಲೂಕಿನಲ್ಲಿ ವಿತರಿಸಲಾಗಿದ್ದ 575 ಚೀಲ ಗೊಬ್ಬರವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮಸ್ಕಿ ಹಾಗೂ ಲಿಂಗಸುಗೂರು ತಾಲೂಕಿನ ಕಣಿಕಲ್ಲೂರು ಮತ್ತು ಬಟ್ಟೂರು ಗ್ರಾಮದಲ್ಲಿ ಎರಡು ಲೋಡ್ ಲಾರಿ ಗೊಬ್ಬರ ನೀಡಲಾಗಿತ್ತು. ಚಾಲಕನ ನೆರವಿನಿಂದ ಗೊಬ್ಬರ ಪತ್ತೆ ಮಾಡಿದ ಅಧಿಕಾರಿಗಳು, ಪೊಲೀಸರ ಸಮ್ಮುಖದಲ್ಲಿ ಮಸ್ಕಿಯ ಕೃಷಿ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.