ಬೆಂಗಳೂರು: ಆಂಜನೇಯ ಜನಿಸಿರುವ ಅಂಜನಾದ್ರಿ ಬೆಟ್ಟಕ್ಕೆ ಮೂಲಭೂತ ಸೌಕರ್ಯ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಇಂದು ನಿರ್ಧಾರ ಕೈಗೊಂಡಿತು.
ಅಂಜನಾದ್ರಿ ಬೆಟ್ಟ ಅಭಿವೃದ್ಧಿ: ಮೊದಲ ಹಂತದಲ್ಲಿ 50 ಕೋಟಿ ಅನುದಾನ ಬಿಡುಗಡೆಗೆ ನಿರ್ಧಾರ - ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ಅನುದಾನ
ಐತಿಹಾಸಿಕ ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಪ್ರಥಮ ಹಂತದಲ್ಲಿ ರೂ.50.00 ಕೋಟಿಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸಚಿವ ಈಶ್ವರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಹೊಸ ರೂಪ ಕೊಡಲು ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಐತಿಹಾಸಿಕ ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಪ್ರಥಮ ಹಂತದಲ್ಲಿ 50.00 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ನಿರ್ಧಾರ ಕೈಗೊಳ್ಳಲಾಯಿತು. ಮುಂದಿನ ಸಚಿವ ಸಂಪುಟದಲ್ಲಿ ಈ ವಿಷಯವನ್ನು ಮಂಡಿಸಿ ಅನುಮೋದನೆ ಪಡೆಯಲು ಸಹ ನಿರ್ಧರಿಸಲಾಯಿತು.
ಏಪ್ರಿಲ್ 16 ರಂದು ಸಚಿವರುಗಳಾದ ಕೆ.ಎಸ್.ಈಶ್ವರಪ್ಪ, ಸಿ.ಪಿ.ಯೋಗೇಶ್ವರ, ಕೋಟ ಶ್ರೀನಿವಾಸ ಪೂಜಾರಿ, ಬಿ.ಸಿ.ಪಾಟೀಲ್ ಹಾಗೂ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲಿದ್ದಾರೆ. ನಂತರ, ಅಂಜನಾದ್ರಿ ಬೆಟ್ಟಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕಾಮಗಾರಿಗಳಿಗೆ ಚಾಲನೆ ನೀಡಲು ತೀರ್ಮಾನಿಸಲಾಗಿದೆ.
- ಪ್ರಥಮ ಹಂತದಲ್ಲಿ ಅಂಜನಾದ್ರಿ ಬೆಟ್ಟಕ್ಕೆ ಕುಡಿಯುವ ನೀರು, ಶೌಚಾಲಯ, ಸ್ನಾನದ ಗೃಹ ಮತ್ತು ರಸ್ತೆ ನಿರ್ಮಾಣ ಮಾಡುವುದು.
- ಕಸ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ.
- ಬೆಟ್ಟದ ಕೆಳಭಾಗದಲ್ಲಿ ಪ್ರವಾಸಿಗರ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು. ಬೆಟ್ಟದ ಮುಂಭಾಗದಲ್ಲಿರುವ ಹುಲಿಗಿ ಗಂಗಾವತಿ ರಾಜ್ಯ ಹೆದ್ದಾರಿಯನ್ನು 1 ಕಿ.ಮೀ. ಅಗಲೀಕರಣ ಮಾಡುವುದು.
- ಬೀದಿ ದೀಪಗಳನ್ನು ಅಳವಡಿಸುವುದು. ಸೇವಾ ಹಾಗೂ ಟಿಕೆಟ್ ಕೌಂಟರ್ ನಿರ್ಮಾಣ ಮಾಡುವುದು.
- ಪ್ರವಾಸಿಗರಿಗೆ ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆ ಮಾಡುವುದು.
- ಮೊಬೈಲ್ ಸಂಪರ್ಕಕ್ಕಾಗಿ ಮೊಬೈಲ್ ಟವರ್ ಅಳವಡಿಸುವುದಕ್ಕೆ ಆದ್ಯತೆ ನೀಡಲು ನಿರ್ಧರಿಸಲಾಯಿತು.
ಮುಖ್ಯಮಂತ್ರಿಗಳು ಆಯವ್ಯಯದಲ್ಲಿ ರೂ.50.00 ಕೋಟಿ ರೂಗಳನ್ನು ಒದಗಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಇಲಾಖೆಯಲ್ಲಿ ಮೀಸಲಿಟ್ಟಿರುವ ರೂ.2.68 ಕೋಟಿ ರೂ.ಗಳನ್ನು ಹಾಗು ಮುಜರಾಯಿ ಇಲಾಖೆಯಲ್ಲಿರುವ ರೂ.1.40 ಕೋಟಿ, ಪ್ರವಾಸೋದ್ಯಮ ಇಲಾಖೆಯಿಂದ 50 ಲಕ್ಷ ಮತ್ತು ಕೇಂದ್ರ ಕೈಗಾರಿಕೆ ಇಲಾಖೆಯ ಹ್ಯಾಂಡಿ ಕ್ರ್ಯಾಫ್ಟ್ ನಿಂದ ರೂ.10 ಕೋಟಿಗಳನ್ನು ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ಹಣವನ್ನು ಮೀಸಲಿರಿಸಲಾಗಿದೆ. ಒಟ್ಟು ರೂ.50.18 ಕೋಟಿ ರೂ. ಗಳಲ್ಲಿ ಪ್ರಥಮ ಹಂತದ ಕಾಮಗಾರಿಗಳನ್ನು ಮಾಡಲು ಸಭೆ ನಿರ್ಧರಿಸಿತು.
- ಎರಡನೇ ಹಂತದಲ್ಲಿ ಪ್ರವಾಸಿಗರು ತಂಗಲು ಯಾತ್ರಿ ನಿವಾಸ ಹೋಟೇಲ್ ಹಾಗೂ ರೆಸಾರ್ಟ್ ಗಳನ್ನು ನಿರ್ಮಾಣ ಮಾಡುವುದು.
- ಬ್ಯಾಟರಿ ಚಾಲಿತ ವಾಹನಗಳನ್ನು ಖರೀದಿಸುವುದು.
- ತುಂಗಭದ್ರಾ ನದಿಯಲ್ಲಿ ವಾಟರ್ ಸ್ಪೋರ್ಟ್ಸ್ ಬೆಟ್ಟಕ್ಕೆ ರೋಪ್ವೇ ನಿರ್ಮಾಣ ಮಾಡುವುದು.
- ಋಷಿಮುಖ ಪರ್ವತದಲ್ಲಿರುವ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ವೇದ, ವಾಸ್ತು, ಜ್ಯೋತಿಷ್ಯ, ಗೃಹ ನಕ್ಷತ್ರ, ಭೂಕಂಪನ, ಸಮುದ್ರ ಕಂಪನ ಹಾಗೂ ಶರೀರ ಆವಯವಗಳ ಪಾಠಗಳ ಹಾಗೂ ಸಂಸ್ಕೃತ ವಿಶ್ವವಿದ್ಯಾಲಯ ಪ್ರಾರಂಭಿಸುವುದು.
- ಸಾಣಾಪುರ ಕೆರೆ ಹತ್ತಿರ ನೀರನ ವಿಭಿನ್ನ ವಿನ್ಯಾಸಗಳನ್ನು ಮಾಡುವ ಲೇಸರ್ ಶೋ ಮಾಡುವುದು. ಒಟ್ಟಾರೆ ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸಿಗರಿಗೆ ಅಗತ್ಯವಿರುವ ಎಲ್ಲಾ ಅನುಕೂಲಗಳನ್ನು ಕಲ್ಪಿಸಿಕೊಡಲು ನಿರ್ಧರಿಸಲಾಯಿತು.
- ದೇಶದ 4 ಐತಿಹಾಸಿಕ ಹಾಗೂ ಪುರಾತನ ಸರೋವರಗಳಲ್ಲಿ ಪಂಪ ಸರೋವರ ಸಹ ಒಂದಾಗಿದ್ದು, ಸಮಗ್ರವಾಗಿ ಅಭಿವೃದ್ಧಿ ಮಾಡುವುದು. 101 ಬಾವಿಗಳ ಪುನಶ್ಚೇತನ ಸೇರಿದಂತೆ ಅಂಜನಾದ್ರಿ ಬೆಟ್ಟ ಮತ್ತು ಆನೆಗುಂದಿ ಪ್ರದೇಶದ 100 ಎಕರೆ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿ ಮಾಡಲು ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅಂಜನಾದ್ರಿ ಬೆಟ್ಟದಲ್ಲಿ ಒಂದು ಗೋಶಾಲೆಯಿದ್ದು, ಸಾವಿರ ದನಕರುಗಳಿವೆ ಇದರ ಜೊತೆಗೆ ಇನ್ನೊಂದು ಗೋಶಾಲೆ ತೆರೆಯಲು ಸಭೆ ನಿರ್ಧರಿಸಿತು.
ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಸಿ.ಪಿ. ಯೋಗೇಶ್ವರ, ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಶ್ರೀನಿವಾಸ ಪೂಜಾರಿ, ಕೃಷಿ ಸಚಿವ ಬಿ.ಸಿ. ಪಾಟೀಲ್, ಗಂಗಾವತಿ ಶಾಸಕ ದೊಡ್ಡನಗೌಡ, ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಮಹೇಂದ್ರಜೈನ್, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೇ, ಜಂಗಲ್ ಲಾಡ್ಜಸ್ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್, ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.