ಕೊಪ್ಪಳ:ಉದ್ಯೋಗ ಖಾತ್ರಿ ಯೋಜನೆ ದುಡಿಯುವ ಅನೇಕ ಕೈಗಳಿಗೆ ಕೆಲಸ ನೀಡಿ ಬದುಕು ಕಟ್ಟಿಕೊಳ್ಳಲು ಪೂರಕವಾಗಿದೆ. ಕೊಪ್ಪಳ ಜಿಲ್ಲೆ ಈ ಯೋಜನೆಯಡಿ ವಿಶೇಷಚೇತನರಿಗೂ ಕೆಲಸ ನೀಡುವ ಮೂಲಕ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಪ್ರಾಯೋಗಿಕವಾಗಿ 18 ಜನ ದಿವ್ಯಾಂಗರಿಗೆ ಉದ್ಯೋಗ ಕಲ್ಪಿಸಲಾಗಿದೆ.
ಸಾಮಾನ್ಯವಾಗಿ ವಿಶೇಷಚೇತರು ತಮ್ಮ ಕೆಲಸ ಮಾಡಿಕೊಳ್ಳಲು ಮತ್ತೊಬ್ಬರನ್ನು ಆಶ್ರಯಿಸುತ್ತಾರೆ ಎಂಬುದು ಸಹಜವಾಗಿ ಕೇಳಿ ಬರುವ ಮಾತು. ಆದರೆ ಇದಕ್ಕೆ ಅಪವಾದ ಎಂಬಂತೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ವಿಶೇಷಚೇತನರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ಚೀಟಿ ಪಡೆದು ಕೆಲಸ ಮಾಡುತ್ತಿದ್ದಾರೆ.
ರಾಜ್ಯದಲ್ಲಿಯೇ ಮೊದಲು:
ರಾಜ್ಯದಲ್ಲಿಯೇ ಮೊದಲು ಎಂಬಂತೆ ವಡ್ಡರಹಟ್ಟಿ ಗ್ರಾಮದ 18 ಜನ ವಿಶೇಷಚೇತನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಚೀಟಿ ನೀಡಿ ಕೆಲಸ ಕೊಡಲಾಗಿದೆ. ಒಂದು ಎಕರೆ ಸರ್ಕಾರಿ ಭೂಮಿಯಲ್ಲಿ ಪೌಷ್ಠಿಕ ತೋಟದಲ್ಲಿ ಈ 18 ಜನರು ಬೆಳೆ ಬೆಳೆಯುತ್ತಿದ್ದಾರೆ.
ಒಂದೆಕರೆ ಭೂಮಿಯಲ್ಲಿ ಕೆಲಸ:
ಕೊಪ್ಪಳದಲ್ಲಿ ದಿವ್ಯಾಂಗರ ಸ್ವಾವಲಂಬಿ ಬದುಕು; ಒಂದೆಕರೆ ಭೂಮಿಯಲ್ಲಿ ವಿವಿಧ ಬೆಳೆ ಒಂದು ಎಕರೆ ಸರ್ಕಾರಿ ಭೂಮಿಯನ್ನು ಹದ ಮಾಡಿಕೊಂಡು ಟೊಮ್ಯಾಟೋ, ಮೆಣಸಿನಕಾಯಿ, ಕೊತ್ತಂಬರಿ ಬೆಳೆಯುತ್ತಿದ್ದಾರೆ. ಈ ತೋಟದಲ್ಲಿ ನೀರು ಹರಿಸುವುದು, ಕಸ ತಗೆಯುವುದು ಸೇರಿ ತೋಟದ ಎಲ್ಲ ಕೆಲಸವನ್ನು ಮಾಡುತ್ತಾರೆ.
ಗುಂಪು ಮಾದರಿಯಲ್ಲಿ ಕೆಲಸ:
ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗುಂಪು ಮಾದರಿಯಲ್ಲಿ ಕೆಲಸ ಮಾಡುವುದಕ್ಕೆ ಅವಕಾಶವಿರುವುದರಿಂದ ಕೊಪ್ಪಳ ಜಿಲ್ಲಾ ಪಂಚಾಯತ್ ಪ್ರಾಯೋಗಿಕವಾಗಿ 18 ಜನ ವಿಶೇಷಚೇತನರನ್ನು ಗುರುತಿಸಿ ಅವರಿಗೆ ಉದ್ಯೋಗ ಖಾತ್ರಿ ಚೀಟಿ ನೀಡಿ ಕೆಲಸ ಮಾಡಲು ಅವಕಾಶ ಕಲ್ಪಿಸಿದೆ. ದೈಹಿಕವಾಗಿ ಸರಿ ಇರುವ ಜನರಿಗೆ ಖಾತ್ರಿ ಯೋಜನೆಯಲ್ಲಿ ಕೆಲಸ ನೀಡಲಾಗುತ್ತಿತ್ತು. ಆದರೆ ವಿಶೇಷಚೇತನರಿಗೂ ಈಗ ಕೊಪ್ಪಳ ಜಿಲ್ಲಾ ಪಂಚಾಯತ್ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವ ಅವಕಾಶ ನೀಡುವ ಮೂಲಕ ವಿಶೇಷಚೇತನರು ಯಾವುದರಲ್ಲೂ ಕಡಿಮೆ ಇಲ್ಲ ಎಂಬ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿ ಗಮನ ಸೆಳೆದಿದೆ.