ಗಂಗಾವತಿ: ಮಾಧ್ವ ಸಂಪ್ರದಾಯದ ತ್ರಿಮತಸ್ಥರ ಧಾರ್ಮಿಕ ನಂಬಿಗೆಯ ಪುಣ್ಯಭೂಮಿ, ತಾಲೂಕಿನ ಆನೆಗೊಂದಿ ಸಮೀಪ ಇರುವ ನವ ವೃಂದಾವನ ಗಡ್ಡೆಯಲ್ಲಿನ ನವ ಯತಿಗಳ ವೃಂದಾವನಕ್ಕೆ ಇದೀಗ ಸಿಸಿಟಿವಿ ಪಹರೆಯ ವ್ಯವಸ್ಥೆ ಮಾಡಲಾಗಿದೆ.
ನಿಧಿ ಆಸೆಯಿಂದ ದುಷ್ಕರ್ಮಿಗಳು 2019ರ ಜುಲೈ 19ರಂದು ನಡೆಸಿದ್ದ ವ್ಯಾಸರಾಯರ ವೃಂದಾವನ ಧ್ವಂಸ ಪ್ರಕರಣದಿಂದಾಗಿ ಭಕ್ತ ಸಮೂಹ ಆಘಾತಕ್ಕೆ ಒಳಗಾಗಿತ್ತು. ತಕ್ಷಣವೇ ಉತ್ತರಾಧಿ ಮಠ ಹಾಗೂ ಮಂತ್ರಾಲಯದ ಮಠದ ಶ್ರೀಗಳ ಸಮ್ಮುಖದಲ್ಲಿ ವೃಂದಾವನ ನಿರ್ಮಾಣ ಕಾರ್ಯ ಪೂರ್ಣಗೊಂಡಿತ್ತು.
ಕನಿಷ್ಠಮಟ್ಟದ ಸೌಲಭ್ಯಗಳಿಲ್ಲದ ವೃಂದಾವನದಲ್ಲಿ ಅಗತ್ಯ ಸೌಲಭ್ಯ ಹಾಗೂ ಧಾರ್ಮಿಕ ಪುಣ್ಯ ತಾಣವಾದ ನವ ವೃಂದಾವನ ಗಡ್ಡೆಯ ಬಗ್ಗೆ ಉಭಯ ಮಠದ ಶ್ರೀಗಳು ರಕ್ಷಣೆಗೆ ಸಂಕಲ್ಪ ಮಾಡಿದ ಪರಿಣಾಮ ಕಳೆದ ತಿಂಗಳು ಸೇಫ್ಟಿ ಗ್ರಿಲ್ಸ್ ಅಳವಡಿಸಲಾಗಿದೆ. ಯಾರೊಬ್ಬರೂ ಸುಲಭವಾಗಿ ಯತಿಗಳ ವೃಂದಾವನ ಸ್ಥಳಕ್ಕೆ ತೆರಳದಂತೆ ರಕ್ಷಣೆ ನೀಡಲಾಗಿದೆ. ಇದೀಗ 16 ಸಿಸಿಟಿವಿ ಕ್ಯಾಮರಾ ಅಳವಡಿಸುವ ಮೂಲಕ ಮತ್ತಷ್ಟು ಭದ್ರತೆ, ಕಣ್ಗಾವಲು ಇಡಲಾಗಿದೆ.
ಈ ಬಗ್ಗೆ ಈಟವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ ಆನೆಗೊಂದಿ ಮಠದ ವ್ಯವಸ್ಥಾಪಕ ಸುಮಂತ ಕುಲಕರ್ಣಿ, ಮೊದಲ ಬಾರಿಗೆ 72 ವ್ಯಾಟ್ ಬಲ್ಪ್ ಹಾಕಿ ವೃಂದಾವನದ ಸುತ್ತಲೂ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಆತಂಕ ದೂರ ಮಾಡಲು ಶ್ರೀಗಳು ಶ್ರಮಿಸುತ್ತಿದ್ದಾರೆ ಎಂದರು.
ಓದಿ:ನವ ವೃಂದಾವನದ ಗಡ್ಡೆಯ ಯತಿಗಳ ಸಮಾಧಿ ರಕ್ಷಣೆಗೆ ಸೇಫ್ಟಿ ಗ್ರೀಲ್ ಅಳವಡಿಕೆ