ಕೊಪ್ಪಳ: ಜಿಲ್ಲೆಯಲ್ಲಿ ರುದ್ರಭೂಮಿ ಸಮಸ್ಯೆ ಇರುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಅದಕ್ಕಾಗಿ ಒಟ್ಟು 150 ಎಕರೆ ಭೂಮಿಯನ್ನು ಈಗಾಗಲೇ ಮಂಜೂರು ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಸಚಿವರು, ವಿವಿಧ ಪಿಂಚಣಿದಾರರಿಗೆ ಅಂಚೆ ಕಚೇರಿಯಿಂದ ಸರಿಯಾಗಿ ಪಿಂಚಣಿ ದೊರೆಯದ ಹಿನ್ನೆಲೆ, ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅರಣ್ಯ ಇಲಾಖೆಯ ಹಾಗೂ ಕಂದಾಯ ಇಲಾಖೆಯ ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಸಚಿವರೊಂದಿಗೆ ಸಭೆ ನಡೆಸಿ ಒಂದು ನಿರ್ಧಾರಕ್ಕೆ ಬರಲಾಗಿದೆ. ಕಂದಾಯ ಇಲಾಖೆಯು ನೀಡಬೇಕಾದ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಬೇಕಿದೆ. ಅದರಂತೆ ಅರಣ್ಯ ಇಲಾಖೆಯು ಸಹ ಕಂದಾಯ ಇಲಾಖೆಗೆ 6 ಲಕ್ಷ ಹೆಕ್ಟೇರ್ ಭೂಮಿ ನೀಡಬೇಕಿದೆ ಎಂದು ಸ್ಪಷ್ಟಪಡಿಸಿದರು.