ಕರ್ನಾಟಕ

karnataka

ETV Bharat / state

ಕೊಪ್ಪಳ: 2020-21ನೇ ಸಾಲಿನಲ್ಲಿ 12 ರೈತರ ಆತ್ಮಹತ್ಯೆ - 12 ಮಂದಿ ರೈತರು ಆತ್ಮಹತ್ಯೆಗೆ ಶರಣು

2020-21ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 12 ಮಂದಿ ರೈತರು ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.

koppal
ಕೊಪ್ಪಳ: 2020-21ನೇ ಸಾಲಿನಲ್ಲಿ 12 ಮಂದಿ ರೈತರು ಆತ್ಮಹತ್ಯೆಗೆ ಶರಣು

By

Published : Feb 18, 2021, 7:48 PM IST

ಕೊಪ್ಪಳ:ರೈತರ ಬದುಕೇ ಅನಿಶ್ಚಿತತೆಯ ಆಗರ‌.. ಸದಾ ಸಂಕಷ್ಟದಲ್ಲಿಯೇ ಜೀವನ ನಡೆಸುವ ಅನ್ನದಾತರು ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಹಾಳಾದರೂ ಸಹ ಉತ್ತಿ ಬಿತ್ತುವ ಕಾಯಕವನ್ನು ಮಾತ್ರ ನಿಲ್ಲಿಸುವುದಿಲ್ಲ. ಸಕಾಲಕ್ಕೆ ಮಳೆ ಬಾರದೆ, ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಲಾರದೆ ತೊಂದರೆ ಅನುಭವಿಸುತ್ತಲೇ ಇರುತ್ತಾರೆ. ಹೀಗಾಗಿಯೇ ಅನೇಕ ರೈತರು ಸಾಲದ‌ ಶೂಲಕ್ಕೆ ಸಿಲುಕಿ ಸಾವಿಗೆ ಶರಣಾಗುತ್ತಿದ್ದಾರೆ. 2020-21ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಆತ್ಮಹತ್ಯೆಗೆ ಶರಣಾದ ರೈತರು ಎಷ್ಟು? ಈವರೆಗೆ ಎಷ್ಟು ಮಂದಿ ರೈತರಿಗೆ ಪರಿಹಾರ ಸಿಕ್ಕಿದೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ..

ಉಪವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ ಮಾಹಿತಿ..

2020-21ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 12 ಮಂದಿ ರೈತರು ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸ್ ಎಫ್ಐಆರ್ ಆಧರಿಸಿ ರೈತ ಆತ್ಮಹತ್ಯೆಯ ಒಟ್ಟು 12 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 6 ಪ್ರಕರಣಗಳು ಈಗಾಗಲೇ ಉಪವಿಭಾಗಾಧಿಕಾರಿ ಅಧ್ಯಕ್ಷತೆಯ ಸಮಿತಿಯಲ್ಲಿ ರೈತ ಆತ್ಮಹತ್ಯೆ ಎಂದು ಸಾಬೀತಾಗಿ ಪರಿಹಾರಕ್ಕಾಗಿ ಅಂಗೀಕಾರಗೊಂಡಿವೆ. ಉಳಿದ 6 ಪ್ರಕರಣಗಳಲ್ಲಿ ನಾಲ್ಕು ಪ್ರಕರಣಗಳು ಸಮಿತಿಯಲ್ಲಿ ರೈತ ಆತ್ಮಹತ್ಯೆ ಪ್ರಕರಣದಿಂದ ತಿರಸ್ಕೃತಗೊಂಡಿವೆ. ಇನ್ನುಳಿದ ಎರಡು ಪ್ರಕರಣಗಳು ಸಮಿತಿಯ ‌ಮುಂದೆ ಇವೆ. ಹೀಗಾಗಿ ಜಿಲ್ಲೆಯಲ್ಲಿ 2020-21 ರಲ್ಲಿ ವರದಿಯಾದ ಒಟ್ಟು 12 ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ 6 ಜನ ರೈತರ ಕುಟುಂಬಕ್ಕೆ ಮಾತ್ರ ಪರಿಹಾರ ದೊರೆಯುತ್ತಿದೆ.

ರೈತ ಆತ್ಮಹತ್ಯೆ ಪ್ರಕರಣದ ಕುರಿತ ಪರಿಹಾರ ನೀಡುವ ಸಮಿತಿಯು ಸರ್ಕಾರದ ಮಾನದಂಡಗಳ ಅನ್ವಯ ಪರಿಶೀಲನೆ ನಡೆಸಿ ಇದು ಸಾಲಬಾಧೆಯಿಂದ ಆದ ಆತ್ಮಹತ್ಯೆಯೋ ಅಥವಾ ಬೇರೆ ಕಾರಣದಿಂದ ಆದ ಆತ್ಮಹತ್ಯೆಯೋ ಎಂಬುದನ್ನು ಪರಿಶೀಲನೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಆತ್ಮಹತ್ಯೆ ಮಾಡಿಕೊಂಡ ರೈತ ಹೊಂದಿದ್ದ ಜಮೀನು, ಆತನ ಸಾಲ, ಎಫ್ಐಆರ್, ಆತ್ಮಹತ್ಯೆಗೆ ನಿಜವಾದ ಕಾರಣವೇನು ಎಂಬುದನ್ನು ಪರಿಗಣಿಸಲಾಗುತ್ತದೆ. 2020-21 ನೇ ಸಾಲಿನಲ್ಲಿ ವರದಿಯಾದ 12 ಪ್ರಕರಣಗಳಲ್ಲಿ ಇನ್ನೆರಡು ರೈತ ಆತ್ಮಹತ್ಯೆ ಪ್ರಕರಣಗಳು ಸಮಿತಿಯ ಮುಂದೆ ಇವೆ, ಅದನ್ನು ಪರಿಶೀಲಿಸಲಾಗುತ್ತದೆ ಎಂದು ಉಪವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ ತಿಳಿಸಿದರು.

ABOUT THE AUTHOR

...view details