ಕುಷ್ಟಗಿ (ಕೊಪ್ಪಳ):ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿ 116 ಮಿ.ಮೀ. ಮಳೆಯಾಗಿದೆ.
ತಾವರಗೇರಾದಲ್ಲಿ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯಿಂದಾಗಿ ಬತ್ತಿ ಹೋಗಿದ್ದ ರಾಯನಕೆರೆ ಮುಕ್ಕಾಲು ಭಾಗ ಭರ್ತಿಯಾಗಿದ್ದು, ಕೆಲವು ವಾರ್ಡ್ಗಳ ಮನೆಯೊಳಗೆ ನೀರು ನುಗ್ಗಿದೆ.
ಕಳೆದ ರಾತ್ರಿ ತಾಲೂಕಿನಲ್ಲಿ ಕಿಲ್ಲಾರಹಟ್ಟಿ ಹಾಗೂ ಹನುಮನಾಳದಲ್ಲಿ ಕಡಿಮೆ ಮಳೆ ಹೊರತುಪಡಿಸಿದರೆ ತಾವರಗೇರಾ, ದೋಟಿಹಾಳ, ಹನುಮಸಾಗರ ಕುಷ್ಟಗಿಯಲ್ಲಿ ಉತ್ತಮ ಮಳೆಯಾಗಿದೆ. ಈ ಮಳೆಯಿಂದಾಗಿ ರೈತರಿಗೆ ಬಿತ್ತನೆ ಕಾರ್ಯ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗಿದೆ.
ಕೊರೊನಾ ಆತಂಕದಲ್ಲಿದ್ದ ರೈತರಿಗೆ ಈ ಮಳೆ ಸಂಭ್ರಮ ಹೆಚ್ಚಿಸಿದ್ದು, ಈಗಾಗಲೇ ಹೆಸರು ಬೆಳೆ ಬಿತ್ತನೆ ಕೈಗೊಂಡ ರೈತರಿಗೆ ಸಾಕಷ್ಟು ಅನಕೂಲವಾಗಿದೆ. ತಾಲೂಕಿನಾದ್ಯಂತ ಕೃಷಿ ಹೊಂಡ, ಚೆಕ್ ಡ್ಯಾಂ, ಹಳ್ಳಗಳು ತುಂಬಿ ಹರಿದಿವೆ. ವರುಣನ ಕೃಪೆಯಿಂದಾಗಿ ಬಿಸಿಲಿನ ವಾತವರಣ ತಗ್ಗಿದಂತಾಗಿದೆ.