ಕೊಪ್ಪಳ:ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರ ಪ್ರತಿ ವರ್ಷ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ವರ್ಷಕ್ಕೆ ₹2 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿವೆ. ಆದರೆ ಕಳೆದ ಎರಡು ವರ್ಷಗಳಿಂದ ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೆ ನೀಡಬೇಕಾದ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಹೀಗಾಗಿ, ಅಭಿವೃದ್ಧಿ ಕಾರ್ಯಗಳು ಹಿಂದೆ ಬಿದ್ದಿವೆ.
ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ, ದೇವಸ್ಥಾನ ನಿರ್ಮಾಣ, ಜೀರ್ಣೋದ್ಧಾರ, ಗ್ರಾಮೀಣ ರಸ್ತೆ ನಿರ್ಮಾಣ ಮತ್ತು ದುರಸ್ತಿ, ಚರಂಡಿ ನಿರ್ಮಾಣ ಮತ್ತು ದುರಸ್ತಿ, ನಿರ್ವಹಣೆ, ತುರ್ತು ಕುಡಿಯುವ ನೀರು ಸರಬರಾಜು, ಶಾಲೆಗಳ ಅಭಿವೃದ್ಧಿ, ಬಸ್ ತಂಗುದಾಣ ಮತ್ತು ಪ್ರವಾಸಿ ಸ್ಥಳಗಳಲ್ಲಿ ಮೂಲ ಸೌಕರ್ಯ ಒದಗಿಸುವುದು ಸೇರಿದಂತೆ ಇತರ ಕಾಮಗಾರಿಗಳನ್ನು ಕೈಗೊಳ್ಳಬಹುದು.
ಜಿಲ್ಲಾಡಳಿತ ನೀಡಿರುವ ಮಾಹಿತಿಯ ಪ್ರಕಾರ 2018-19 ಹಾಗೂ 2019-20ನೇ ಸಾಲಿನ ಹಣ ಸೇರಿ ತಲಾ ₹2.31 ಕೋಟಿಯಂತೆ ಐದೂ ಕ್ಷೇತ್ರಗಳಿಗೆ 11.56 ಕೋಟಿ ರೂ. ಅನುದಾನ ಬಂದಿದೆ. ಈ ಪೈಕಿ ₹10.86 ಕೋಟಿ ಮೊತ್ತದ ಕಾಮಗಾರಿಗಳಿಗೆ ಜಿಲ್ಲಾಡಳಿತ ಮಂಜೂರಾತಿ ನೀಡಿದೆ. 2018-19ನೇ ಸಾಲಿನಲ್ಲಿ ಪ್ರತಿ ಕ್ಷೇತ್ರಕ್ಕೆ ₹2 ಕೋಟಿ ರೂಪಾಯಿ ಬದಲಿಗೆ ₹1.65 ಕೋಟಿ ಮತ್ತು 2019-20ನೇ ಸಾಲಿನಲ್ಲಿ ಪ್ರತಿ ಕ್ಷೇತ್ರಕ್ಕೆ ಕೇವಲ ₹66 ಲಕ್ಷ ಮಾತ್ರ ಬಿಡುಗಡೆಗೊಂಡಿದೆ. ಕೋವಿಡ್-19 ಹಿನ್ನೆಲೆಯಲ್ಲಿ 2020-21ನೇ ಸಾಲಿನ ಅನುದಾನ ಇನ್ನೂ ಆರಂಭವಾಗಿಲ್ಲ.
ಬಿಡುಗಡೆಯಾದ ಅನುದಾನದ ಮಾಹಿತಿ ಮಂಜೂರಾತಿ ನೀಡಿದ 372 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 81 ಕಾಮಗಾರಿಗಳು, ಗಂಗಾವತಿ 53, ಯಲಬುರ್ಗಾ 133, ಕನಕಗಿರಿ 43 ಹಾಗೂ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 62 ಕಾಮಗಾರಿಗಳು ಸೇರಿ ಒಟ್ಟು 372 ಕಾಮಗಾರಿ ಕೈಗೊಳ್ಳಲಾಗಿದೆ. ಈ ಪೈಕಿ 179 ಕಾಮಗಾರಿಗಳು ಪ್ರಗತಿಯಲ್ಲಿದ್ದು, 22 ಕಾಮಗಾರಿಗಳು ಮುಕ್ತಾಯಗೊಂಡಿವೆ. ಇನ್ನೂ 171 ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿವೆ.
ಈಗಾಗಲೇ ಈ ಕಾಮಗಾರಿಗಳಿಗಾಗಿ ಒಟ್ಟು ₹572.30 ಲಕ್ಷ ಬಿಡುಗಡೆ ಮಾಡಲಾಗಿದೆ. ಇನ್ನೂ ₹ 584.31 ಲಕ್ಷ ಜಿಲ್ಲಾಡಳಿತ ಬಿಡುಗಡೆ ಮಾಡಬೇಕಿದೆ. ಬಿಡುಗಡೆಯಾದ ಹಣದಲ್ಲಿ ಶಾಸಕರು ಸಮುದಾಯ ಭವನ, ಶಾಲೆಗಳ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗಿದೆ. ಆದರೆ, ಉಳಿದ ಅನುದಾನ ಬಿಡುಗಡೆಗೆ ಸರ್ಕಾರ ಕೊರೊನಾ ನೆಪ ಹೇಳುತ್ತಿದೆ ಎನ್ನಲಾಗಿದೆ.