ಗಂಗಾವತಿ:ನಿನ್ನೆಯಷ್ಟೇ ಬಿಜೆಪಿ ಸರ್ಕಾರ ತನ್ನ ಅವಧಿಯ ಕೊನೆಯ ಬಜೆಟ್ ಅನ್ನು ಮಂಡಿಸಿದೆ. ಗಂಗಾವತಿ ತಾಲೂಕಿನ ಪ್ರಮುಖ ಐತಿಹಾಸಿಕ ಹಾಗೂ ಧಾರ್ಮಿಕ ತಾಣವಾದ ಅಂಜನಾದ್ರಿಯನ್ನು ವಿಶ್ವದರ್ಜೆಯ ಧಾರ್ಮಿಕ ತಾಣವನ್ನಾಗಿಸುವ ನಿಟ್ಟಿನಲ್ಲಿ 2023-24ನೇ ಸಾಲಿನ ಮುಂಗಡಪತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ನೂರು ಕೋಟಿ ರೂಪಾಯಿ ಘೋಷಣೆ ಮಾಡುವ ಮೂಲಕ ಜಿಲ್ಲೆಯ ಮಾತ್ರವಲ್ಲ ಇಡೀ ರಾಜ್ಯದ ಗಮನ ಸೆಳೆದಿದ್ದಾರೆ.
ಈಗಾಗಲೇ ಅಂಜನಾದ್ರಿಯನ್ನು ಧಾರ್ಮಿಕ ಕ್ಷೇತ್ರವಾಗಿ ಹಾಗೂ ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಲು ಮಾಸ್ಟರ್ ಪ್ಲಾನ್ ಯೋಜನೆ ಜಾರಿಗೆ ತಂದಿರುವ ರಾಜ್ಯ ಸರ್ಕಾರ, 120 ಕೋಟಿ ಬಿಡುಗಡೆ ಮಾಡಿದೆ. ಅಗತ್ಯ ಮೂಲ ಸೌಕರ್ಯ ನಿರ್ಮಾಣ, ವಸತಿ ಸಮುಚ್ಚಯ ನಿರ್ಮಾಣ, ಸ್ನಾನಘಟ್ಟ, ಶೌಚಾಲಯ, ವಾಣಿಜ್ಯ ಸಂಕೀರ್ಣ ಸೇರಿದಂತೆ ನಾನಾ ಉದ್ದೇಶಿತ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿದೆ.
ಈಗಾಗಲೇ ಕೊಪ್ಪಳ ತಾಲೂಕಿನ ಹಿಟ್ನಾಳ್ ಕ್ರಾಸ್ನಿಂದ ಗಂಗಾವತಿಯ ಸಾಯಿಬಾಬಾ ದೇವಸ್ಥಾನದ ವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಪ್ರವಾಸಿ ಆಕರ್ಷಣೆಯಾಗಿ ಅಂಜನಾದ್ರಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣ, ಥೀಮ್ ಪಾರ್ಕ್ ನಿರ್ಮಾಣದಂತ ಯೋಜನೆ ರೂಪಿಸಲಾಗಿದೆ.
ರೈತರಿಗೆ ನೋಟಿಸ್:ವಸತಿ, ವಾಣಿಜ್ಯ, ಶೌಚಾಲಯ, ವಾಹನ ಪಾರ್ಕಿಂಗ್ನಂತಹ ಕಾಮಗಾರಿಗೆ ಅಗತ್ಯವಾಗುವ ಜಮೀನು ಖರೀದಿಗೆ ಮುಂದಾಗಿರುವ ಸರ್ಕಾರ, ಈಗಾಗಲೇ ರೈತರಿಂದ ಭೂ ಸ್ವಾಧೀನ ಕಾರ್ಯಕ್ಕೆ ಮುಂದಾಗಿದ್ದು, ಅದಕ್ಕೆ ಸಂಬಂಧಿಸಿ ರೈತರಿಗೆ ನೋಟಿಸ್ಗಳನ್ನು ಜಾರಿ ಮಾಡಿದೆ. ಇದರ ಮಧ್ಯೆ ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಂಜನಾದ್ರಿ ಅಭಿವೃದ್ಧಿಗೆ ಎರಡನೇ ಹಂತದಲ್ಲಿ ಬಜೆಟ್ನಲ್ಲಿ ನೂರು ಕೋಟಿ ಅನುದಾನ ನೀಡಿರುವುದು ಸಹಜವಾಗಿ ಹನುಮನ ಭಕ್ತರಲ್ಲಿ ಸಂಸತಕ್ಕೆ ಕಾರಣವಾಗಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ:ಅಂಜನಾದ್ರಿ ಬೆಟ್ಟವನ್ನು ರಾಜ್ಯದ ಪ್ರಮುಖ ಧಾರ್ಮಿಕ ತಾಣವಾಗಿಸುವ ನಿಟ್ಟಿನಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮೊದಲ ಬಾರಿಗೆ ತಮ್ಮ ಅಧಿಕಾರದ ಅವಧಿಯಲ್ಲಿ 20 ಕೋಟಿ ಮೊತ್ತದ ಅನುದಾನ ಬಿಡುಗಡೆ ಮಾಡಿದ್ದರು. ಆ ಬಳಿಕ ಬಸವರಾಜ ಬೊಮ್ಮಾಯಿ ಅವರು ನೂರು ಕೋಟಿ ಬಿಡುಗಡೆ ಮಾಡಿದ್ದರು. ಇದೀಗ 2023-24ನೇ ಸಾಲಿನ ಬಜೆಟ್ನಲ್ಲಿ ನೂರು ಕೋಟಿ ಘೋಷಣೆ ಮಾಡಿದ್ದಾರೆ. ಅಲ್ಲದೇ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದಲೂ 60 ಕೋಟಿ ಮೊತ್ತದ ಅನುದಾನ ಸಿಕ್ಕಿದೆ.
ಮತೀಯ ಸೂಕ್ಷ್ಮಕೇಂದ್ರ:ಕೋಮು ಸೂಕ್ಷ್ಮತೆ ಹೊಂದಿರುವ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ಬಿಜೆಪಿ ಹಿಂದುತ್ವ ಅಜೆಂಡಾದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಇದೀಗ ಸಿಎಂ, ನೂರು ಕೋಟಿ ಅನುದಾನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ ಮುಖ್ಯವಾಗಿ ಹಿಂದೂಗಳ ಮತ ಬ್ಯಾಂಕ್ ಅದರಲ್ಲೂ ಆಂಜನೇಯನ ಭಕ್ತರ ಒಗ್ಗಟ್ಟು ಮಾಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಈ ಹೆಜ್ಜೆ ಇರಿಸಿದೆ ಎಂದು ರಾಜಕೀಯ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಒಟ್ಟಾರೆ ನೂರು ಕೋಟಿ ಅನುದಾನ ಹನುಮನ ಭಕ್ತರಲ್ಲಿ ಸಂತಸಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಬಜೆಟ್ನಲ್ಲಿ ಪ್ರವಾಸೋದ್ಯಮ: ರಾಮನಗರದಲ್ಲಿ ರಾಮಮಂದಿರ, ಅಂಜನಾದ್ರಿ ಅಭಿವೃದ್ಧಿಗೆ ₹100 ಕೋಟಿ