ಕೋಲಾರ : ಆತ ಚಿಕ್ಕಂದಿನಲ್ಲೇ ತಂದೆ ತಾಯಿಯನ್ನ ಕಳೆದುಕೊಂಡು ತಬ್ಬಲಿಯಾಗಿದ್ದ ಯುವಕ. ಹೆತ್ತವರನ್ನ ಕಳೆದುಕೊಂಡು ತನ್ನ ಸ್ವಂತ ದುಡಿಮೆಯಿಂದಲೇ ಬುದುಕು ಕಟ್ಟಿಕೊಂಡಿದ್ದ. ಹೀಗಿರುವಾಗ ಜಮೀನು ಹಂಚಿಕೆ ವಿಚಾರದಲ್ಲಿ ತನ್ನವರೇ ನೀಡಿದ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾಗಿದ್ದಾನೆ.
ಈ ಘಟನೆ ನಡೆದಿರುವುದು ಕೋಲಾರ ತಾಲೂಕಿನ ಮದನಹಳ್ಳಿ ಗ್ರಾಮದಲ್ಲಿ. ಮದನಹಳ್ಳಿ ಗ್ರಾಮದ ಮಂಜುನಾಥ್ ( 35 ) ಎಂಬಾತ ಬುಧವಾರ ರಾತ್ರಿ ಊಟ ಮುಗಿಸಿಕೊಂಡು ಮಲಗಲೆಂದು ಹೋದವನು ನೇಣಿಗೆ ಶರಣಾಗಿದ್ದಾನೆ. ತನ್ನ ಸಾವಿಗೆ ಚಿಕ್ಕಪ್ಪ ರಮೇಶ್ ಹಾಗೂ ಚಿಕ್ಕಮ್ಮ ಅಶ್ವಥಮ್ಮ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾನೆ. ಜೊತೆಗೆ ವಾಯ್ಸ್ ರೆಕಾರ್ಡ್ ಮಾಡಿ ವಾಟ್ಸ್ ಆ್ಯಪ್ ಮೂಲಕ ತನ್ನ ಸ್ನೇಹಿತರಿಗೆ ಕಳಿಸಿದ್ದಾನೆ. ನಂತರ ನೇಣು ಬಿಗಿದುಕೊಂಡು ಅತ್ಮಹತ್ಯೆಗೆ ಶರಣಾಗಿದ್ದಾನೆ.
ಮದನಹಳ್ಳಿ ಗ್ರಾಮದ ನಾರಾಯಣಸ್ವಾಮಿ ಹಾಗೂ ಚಿನ್ನಮ್ಮ ಎಂಬವರ ನಾಲ್ಕನೇ ಮಗನಾದ ಮಂಜುನಾಥ್, ಚಿಕ್ಕಂದಿನಲ್ಲಿ ತನ್ನ ತಂದೆ ತಾಯಿಯನ್ನ ಕಳೆದುಕೊಂಡು, ಚಿಕ್ಕಪ್ಪ ರಮೇಶ್ ಮತ್ತು ಅಕ್ಕಂದಿರ ಆಶ್ರಯದಲ್ಲಿ ಬೆಳೆದಿದ್ದ. ಎಸ್.ಎಸ್.ಎಲ್.ಸಿ ನಂತರ ಬೆಂಗಳೂರಿನಲ್ಲಿ ಸ್ವಂತ ಹೋಟೆಲ್ ನಡೆಸುತ್ತಿದ್ದ ಮಂಜುನಾಥ್, ಚಿಕ್ಕಪ್ಪ ರಮೇಶ್ ಸಹಾಯದಿಂದ ಒಂದಷ್ಟು ಜಮೀನು ಮಾರಿ ಅಕ್ಕಂದಿರರ ಮದುವೆ ಕೂಡ ಮಾಡಿದ್ದ. ಬೆಂಗಳೂರಿನಲ್ಲಿ ಹೋಟೆಲ್ ನಡೆಸುತ್ತಿದ್ದ ಮಂಜುನಾಥ್, ಕೊರೊನಾ ಲಾಕ್ ಡೌನ್ ವೇಳೆ ಗ್ರಾಮಕ್ಕೆ ಬಂದು ತನ್ನ ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದ.
ಲಾಕ್ ಡೌನ್ ಬಳಿಕ ಊರಿಗೆ ಬಂದಿದ್ದ ಮಂಜುನಾಥ್, ತನ್ನ ಪಾಲಿನ ಆಸ್ತಿ ಎಷ್ಟಿದೆ ಎಂದು ಸರ್ವೆ ಮಾಡಿಸಲು ಮುಂದಾಗಿದ್ದ. ಅಲ್ಲದೆ, ಚಿಕ್ಕಪ್ಪನಿಂದ ತನಗೆ ಬರಬೇಕಿದ್ದ ಆಸ್ತಿಯಲ್ಲಿ ಮೋಸ ಆಗಿದೆ. ಜಮೀನು ಹಂಚಿಕೆಯಲ್ಲಿ ಚಿಕ್ಕಪ್ಪ ರಮೇಶ್ ಹಾಗೂ ಚಿಕ್ಕಮ್ಮ ಅಶ್ವಥಮ್ಮ ಮೋಸ ಮಾಡಿದ್ದಾರೆಂದು, ಆಗಾಗ ಚಿಕ್ಕಪ್ಪನ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಈ ಕುರಿತು ಸ್ನೇಹಿತರೊಂದಿಗೆ ನೋವು ತೋಡಿಕೊಂಡಿದ್ದ ಮಂಜುನಾಥ್, ಕಳೆದ ಮೂವತ್ತು ವರ್ಷಗಳಿಂದ ಚಿಕ್ಕಪ್ಪನನ್ನೇ ನಂಬಿದ್ದು, ಇದೀಗ ತಾನು ನಂಬಿಕೆ ಇಟ್ಟಿದ್ದ ಚಿಕ್ಕಪ್ಪನಿಂದಲೇ ಮೋಸವಾಗಿದೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗ್ತಿದೆ. ಸ್ನೇಹಿತರು, ಮಂಜುನಾಥ್ ಸಾವಿಗೆ ಅವನ ಚಿಕ್ಕಪ್ಪನೇ ಕಾರಣ ಎಂದು ಆರೋಪಿಸಿದ್ದಾರೆ. ಮಂಜುನಾಥನ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.