ಕೋಲಾರ: ಸಂಘರ್ಷದ ಒಂದು ತಿಂಗಳ ನಂತರ ಪ್ರತಿಷ್ಠಿತ ಐಫೋನ್ ತಯಾರಿಕಾ ಕಂಪನಿ ವಿಸ್ಟ್ರಾನ್ ತನ್ನ ಕಾರ್ಮಿಕರಿಗೆ ಬಾಕಿ ಇದ್ದ ವೇತನ ಪಾವತಿಸಿ, ಮತ್ತೆ ಸಿಬ್ಬಂದಿ ನೇಮಕಾತಿಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಕೆಲವು ಷರತ್ತುಗಳನ್ನೂ ಹಾಕಿದೆ.
ಡಿಸೆಂಬರ್-12 ರಂದು ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಐಫೋನ್ ತಯಾರಿಕಾ ಕಂಪನಿ ವಿಸ್ಟ್ರಾನ್ ಮೇಲೆ ಅಲ್ಲಿನ ಕಾರ್ಮಿಕರು ದಾಂಧಲೆ ನಡೆಸಿ ಕಂಪನಿಗೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದ್ದರು. ಸರಿಯಾಗಿ ವೇತನ ನೀಡದಿರೋದು ಮತ್ತು ಹೆಚ್ಚಿನ ಕೆಲಸದ ಅವಧಿ ಕಾರ್ಮಿಕರ ಕೋಪಕ್ಕೆ ಕಾರಣವಾಗಿತ್ತು.
ಇದಾದ ನಂತರ ಹಲವು ತನಿಖೆಗಳು, ಪರಿಶೀಲನೆಯ ಬಳಿಕ ಕಂಪನಿ ಕಾರ್ಮಿಕರ ಕ್ಷಮೆ ಕೇಳಿ ತನ್ನ ತಪ್ಪುಗಳನ್ನು ಒಪ್ಪಿಕೊಂಡಿತ್ತು. ಇದರ ನಡುವೆ ವಿಸ್ಟ್ರಾನ್ ಮತ್ತೆ ಇಲ್ಲಿ ಕಾರ್ಯಾರಂಭ ಮಾಡೋದು ಅನುಮಾನ ಎನ್ನುವ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬಂದಿದ್ದವು.