ಕೋಲಾರ:ಕಾರ್ಮಿಕರ ದಾಂಧಲೆಗೆ ತುತ್ತಾಗಿದ್ದ ವಿಸ್ಟ್ರಾನ್ ಕಂಪನಿ ಶೀಘ್ರವಾಗಿ ಕರ್ನಾಟಕದಲ್ಲೇ ತನ್ನ ಕಾರ್ಯಾರಂಭ ಮಾಡಲು ತಯಾರಿ ನಡೆಸುತ್ತಿದೆ. ಆರೋಪಿಗಳಿಂದ ಕಳ್ಳತನವಾದ ಪೋನ್, ಲ್ಯಾಪ್ಟಾಪ್ಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಹಾಗೇ ರಾತ್ರೋ ರಾತ್ರಿ ಕೆಲಸ ಕಳೆದುಕೊಂಡ ಕಾರ್ಮಿಕರು ಕಂಪನಿ ಮತ್ತೆ ಕೆಲಸಕ್ಕಾಗಿ ಗೇಟ್ ಬಳಿ ನಿಂತು ಎದುರು ನೋಡುತ್ತಿದ್ದಾರೆ.
ಕಾರ್ಮಿಕರ ದಾಂಧಲೆ ನಂತರ ಶಾಂತವಾಗಿ ಕಂಡುಬಂದ ವಿಸ್ಟ್ರಾನ್ ಕಂಪನಿ, ಮತ್ತೊಂದೆಡೆ ಕಂಪನಿ ಗೇಟ್ ಬಳಿ ಕೆಲಸಕ್ಕಾಗಿ ಎದುರು ನೋಡುತ್ತಿರುವ ಕಾರ್ಮಿಕರು, ಮತ್ತೊಂದೆಡೆ ದಾಂಧಲೆ ವೇಳೆ ಕಳುವು ಮಾಡಿ ತಂದು ಬಿಸಾಡಿದ್ದ ಪೋನ್, ಲ್ಯಾಪ್ಟಾಪ್ಗಾಗಿ ಹುಡುಕಾಡುತ್ತಿರುವ ಪೊಲೀಸರು. ಇದೆಲ್ಲಾ ವಿಸ್ಟ್ರಾನ್ ಕಂಪನಿ ದಾಂಧಲೆಯ ಅಪ್ಡೇಟ್ಸ್.
ಹೌದು ವಿಸ್ಟ್ರಾನ್ ಕಂಪನಿ ಮೇಲೆ ಕಾರ್ಮಿಕರು ದಾಂಧಲೆ ನಡೆಸಿ ಐದು ದಿನಗಳ ನಂತರ ಒಂದು ಆಶಾದಾಯ ಬೆಳವಣಿಗೆ ಕಂಡು ಬಂದಿದೆ. ವಿಸ್ಟ್ರಾನ್ ಕಂಪನಿ ಶೀಘ್ರವಾಗಿ ನರಸಾಪುರದಲ್ಲಿ ಕಾರ್ಯಾರಂಭ ಮಾಡುವುದಾಗಿ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದೆ. ಜೊತೆಗೆ ಗಲಾಟೆ ವೇಳೆ ಸರ್ಕಾರ ನೀಡಿದ ನೆರವಿಗೆ ಅಭಿನಂದನೆ ಸಲ್ಲಿಸಿರುವ ಕಂಪನಿ ಪೊಲೀಸರ ಸಹಕಾರಕ್ಕೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ.
ಇದನ್ನೂ ಓದಿ:ವಿಸ್ಟ್ರಾನ್ ಕಂಪನಿಯಲ್ಲಿ ದಾಂಧಲೆ: ನೂರಾರು ಕೋಟಿ ರೂಪಾಯಿ ನಷ್ಟ, 11,500 ಕಾರ್ಮಿಕರು ಬೀದಿ ಪಾಲು
ಇದೇ ವೇಳೆ, ಇಂದು ತೈವಾನ್ನಿಂದ ತಂಡವೊಂದು ನರಸಾಪುರದ ಕಂಪನಿಗೆ ಭೇಟಿ ನೀಡಿ ದಾಂಧಲೆ ಹಾಗೂ ದಾಂಧಲೆಯಿಂದಾದ ನಷ್ಟದ ಕುರಿತು ಮಾಹಿತಿ ಪಡೆಯುತ್ತಿದೆ. ಇನ್ನು ಇದೇ ವೇಳೆ ರಾತ್ರೋ ರಾತ್ರಿ ಕಂಪನಿಯಲ್ಲಿ ಕೆಲಸ ಕಳೆದುಕೊಂಡ ಕೆಲವು ಕಾರ್ಮಿಕರು ಗೇಟ್ಬಳಿ ನಿಂತು ಕೆಲಸಕ್ಕಾಗಿ ಎದುರು ನೋಡುತ್ತಿದ್ದ ದೃಶ್ಯಗಳು ಕಂಡು ಬಂದವು.