ಕೋಲಾರ: ಅವರಿಬ್ಬರು ಪ್ರೀತಿಸಿ ಮದುವೆ ಆಗಿದ್ರು. ಯಾರ ಸಹವಾಸವೂ ಬೇಡ ಅಂತ ಊರು ಬಿಟ್ಟು ದೂರದ ಮೈಸೂರಿನಲ್ಲಿ ಜೊತೆಯಾಗಿ ಸಂಸಾರ ಸಹ ಮಾಡ್ತಿದ್ರು. ಇದೀಗ ದಿಢೀರನೇ ಪತಿರಾಯ ಎಸ್ಕೇಪ್ ಆಗಿದ್ದು, ಮದುವೆ ಆದ ತಪ್ಪಿಗೆ ಹೆಂಡತಿ ಗಂಡನಿಗಾಗಿ ಆತನ ಮನೆ ಎದುರು ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದಾಳೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ತಿಪ್ಪಸಂದ್ರ ಗ್ರಾಮದಲ್ಲಿ ಯುವತಿ ಮದುವೆಯಾಗಿರುವ ಫೋಟೋದೊಂದಿಗೆ ಪತಿರಾಯನ ಮನೆ ಎದುರು ಏಕಾಂಗಿ ಹೋರಾಟ ನಡೆಸುತ್ತಿದ್ದಾಳೆ. ಮಾಲೂರು ಸುತ್ತಮತ್ತ ಗಾರೆ ಕೆಲಸ ಮಾಡುತ್ತಿದ್ದ ಮಂಜುನಾಥ್, ಯುವತಿಯನ್ನು ಇಷ್ಟಪಟ್ಟು ಪ್ರೀತಿಸಿ ಮದುವೆಯಾಗಿದ್ದ ಎನ್ನಲಾಗ್ತಿದೆ. ಅನ್ಯ ಜಾತಿ ಆದ್ರೂ ಪರವಾಗಿಲ್ಲ, ನಿನ್ನನ್ನೇ ಮದುವೆ ಆಗ್ತೀನಿ ಅಂತ ಮೂರು ವರ್ಷ ಪ್ರೀತಿಸಿ, ಕೊನೆಗೆ ನಮಗೆ ಯಾರು ಬೇಡ ಕೆಲ ದಿನಗಳ ಕಾಲ ದೂರ ಇರೋಣ ಅಂತ ಹೇಳಿ ದಾಂಪತ್ಯ ಆರಂಭಿಸಿದ್ದನಂತೆ. ಬಳಿಕ ಇಬ್ಬರೂ ಮೈಸೂರಿನಲ್ಲಿ ಒಂದು ವರ್ಷ ಜೀವನ ಸಾಗಿಸಿದ್ದಾರೆ. ಒಂದು ವರ್ಷದ ನಂತರ ಊರಿಗೆ ಬಂದ ಮಂಜುನಾಥ್ ದಿಢೀರನೇ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಇದರಿಂದ ಆತಂಕಕ್ಕೊಳಗಾದ ಸಂತ್ರಸ್ತೆ ನನಗೆ ನನ್ನ ಗಂಡ ಬೇಕು, ಅವರ ಪೋಷಕರು ಆತನನ್ನ ಬಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ಮನೆ ಮುಂದೆ ಪ್ರತಿಭಟಿಸುತ್ತಿದ್ದಾಳೆ.