ಕೋಲಾರ: ಕುಡಿಯಲು ಹಣ ಕೊಡದಿದ್ದಕ್ಕೆ ರೊಚ್ಚಿಗೆದ್ದ ಪತಿಯೊಬ್ಬ ಸುತ್ತಿಗೆಯಿಂದ ಚಚ್ಚಿ ಪತ್ನಿಯನ್ನೇ ಕೊಂದಿರುವ ಅಮಾನುಷ ಘಟನೆ ತಾಲೂಕಿನ ನಾಗನಾಳ ಗ್ರಾಮದಲ್ಲಿ ನಡೆದಿದೆ.
ಕೋಲಾರದಲ್ಲಿ ಗಂಡನಿಂದ ಹೆಂಡತಿ ಕೊಲೆ.. ವಿಜಯಲಕ್ಷ್ಮಿ ಎಂಬುವರು ಮೃತ ದುರ್ದೈವಿ. ಗಂಡ ಸೋಮಶೇಖರ್ ಎಂಬಾತ ಕುಡಿತದ ಚಟಕ್ಕೆ ದಾಸನಾಗಿದ್ದ. ಮದುವೆಯಾಗಿ 14 ವರ್ಷವಾಗಿದ್ದರು ಸಹ ದಿನವೂ ಗಂಡ-ಹೆಂಡತಿ ನಡುವೆ ಜಗಳ ಸಾಮಾನ್ಯವಾಗಿತ್ತು. ವಿಜಯಲಕ್ಷ್ಮಿ ಕೂಲಿ ಮಾಡಿ ಹಣ ಸಂಪಾದಿಸಿ ಸಂಸಾರ ತೂಗಿಸಿಕೊಂಡು ಹೋಗುತ್ತಿದ್ದಳು. ಆದರೆ, ಸೋಮಶೇಖರ್ ಹಣ ಕಿತ್ತುಕೊಂಡು ಕುಡಿದು ಮುಗಿಸುತ್ತಿದ್ದ.
ಆದರೆ, ಇಂದು ಮಾತ್ರ ಸೋಮಶೇಖರ್ ಪಾಪಿ ಕೃತ್ಯ ಎಸಗಿದ್ದಾನೆ. ಕುಡಿಯಲು ಹಣ ಕೇಳಿದಾಗ ಹಣ ಇಲ್ಲ ಎಂದಿದ್ದಕ್ಕೆ ರೊಚ್ಚಿಗೆದ್ದು ಹೆಂಡತಿಯನ್ನು ಬರ್ಬವಾಗಿ ಹತ್ಯೆ ಮಾಡಿದ್ದಾನೆ. ಎರಡು ವರ್ಷಗಳ ಹಿಂದೆ ಕುಡಿಯಲು ಹಣ ನೀಡಿಲ್ಲ ಎಂದು ತನ್ನ ನಾಲ್ಕು ವರ್ಷದ ಮಗ ಗೌತಮ್ ಎಂಬಾತನನ್ನು ಹೊಡೆದು ಕೊಂದಿರುವ ಆರೋಪ ಸಹ ಈತನ ಮೇಲಿದೆ.
ಕೊಲೆಯಾದ ವಿಜಯಲಕ್ಷ್ಮಿ ಮತ್ತು ಆರೋಪಿ ಪತಿ ಸೋಮಶೇಖರ್ ಕುಟುಂಬಸ್ಥರ ನಡುವೆ ದೊಡ್ಡ ಮಟ್ಟದ ವಾಗ್ವಾದ ನಡೆದಿದೆ. ಸ್ಥಳಕ್ಕೆ ಬಂದ ಕೋಲಾರ ಗ್ರಾಮಾಂತರ ಪೊಲೀಸರು ಹಾಗೂ ವೇಮಗಲ್ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.