ಕೋಲಾರ:ನನಗೆ ಸಂಬಂಧವೇ ಇಲ್ಲ ಎನ್ನುವಂತೆ ವೇದಿಕೆಯಲ್ಲಿ ಕುಳಿತಿರುವ ಕೋಲಾರ ಶಾಸಕ ಶ್ರೀನಿವಾಸಗೌಡ. ವೇದಿಕೆಯಲ್ಲಿ ತಮ್ಮ ಪಕ್ಷದ ಭಿನ್ನಮತದ ಬಗ್ಗೆ ಬಹಿರಂಗವಾಗಿಯೇ ಮಾತನಾಡಿದ ಸಿಎಂ ಕುಮಾರಸ್ವಾಮಿ. ಕಾರ್ಯಕ್ರಮಕ್ಕೇ ಬಾರದೆ ಹೋದ ಇನ್ನು ಕೆಲವು ನಾಯಕರು. ಇದೆಲ್ಲಾ ಕೋಲಾರದಲ್ಲಿ ನಡೆದ ಮೈತ್ರಿ ಪಕ್ಷಗಳ ಪರಿವರ್ತನಾ ಸಮಾವೇಶದ ಹೆಸರಲ್ಲಿ ನಡೆದ ಭಿನ್ನಮತ ಶಮನ ಸಭೆಯ ಹೈಲೈಟ್ಸ್.
ಕೋಲಾರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೆ. ಹೆಚ್. ಮುನಿಯಪ್ಪ ಪರ ಪ್ರಚಾರಕ್ಕಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಜೆಡಿಎಸ್ನಿಂದ ಕುಮಾರಸ್ವಾಮಿ ಸೇರಿದಂತೆ, ರಾಜ್ಯದ ಹಿರಿಯ ನಾಯಕರುಗಳೆಲ್ಲಾ ವೇದಿಕೆಗೆ ಬಂದಿದ್ರು. ಅಷ್ಟೇ ಅಲ್ಲದೆ ಅಲ್ಲಿದ್ದ ಭಿನ್ನಮತೀಯರ ಮನವೊಲಿಸಿ, ತಮ್ಮ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವಂತೆ ಮನವಿ ಮಾಡಿದ್ರು. ಅಲ್ಲದೆ ಕೋಲಾರಕ್ಕೆ ಬೇಕಾದ ಮತ್ತಷ್ಟು ನೀರಾವರಿ ಯೋಜನೆಗಳನ್ನು ಜಿಲ್ಲೆಗೆ ಒದಗಿಸುವ ಜೊತೆಗೆ, ತಾನು ಸಿಎಂ ಆಗಿ ಮುಂದುವರೆಯಬೇಕಂದ್ರೆ ನೀವು ಮೈತ್ರಿ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುವಂತೆ ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ರು. ಭಿನ್ನ ಮತೀಯರ ಮನವೊಲಿಸುವ ಪ್ರಯತ್ನ ಮಾಡಿದ್ರು.
ಮೈತ್ರಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಮಾಡಲಾಗಿದ್ದ ಪರಿವರ್ತನಾ ಸಮಾವೇಶಕ್ಕೂ ಕೂಡಾ, ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಸೇರಿದಂತೆ ಅವರ ಬೆಂಬಲಿಗರ್ಯಾರು ಬರಲಿಲ್ಲ. ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿರುವ ಮುಳಬಾಗಿಲು ಶಾಸಕ ಹೆಚ್. ನಾಗೇಶ್, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಕೂಡಾ ಸಮಾವೇಶದತ್ತ ಸುಳಿಯಲೇ ಇಲ್ಲ. ಇನ್ನು ಜೆಡಿಎಸ್ನ ಮಾಲೂರು ಮಾಜಿ ಶಾಸಕ ಮಂಜುನಾಥಗೌಡ ಹಾಗೂ ಅವರ ಬೆಂಬಲಿಗರೂ ಕೂಡಾ ಸಮಾವೇಶದಲ್ಲಿ ಕಾಣಲಿಲ್ಲ. ಕೋಲಾರ ಜೆಡಿಎಸ್ ಶಾಸಕ ಕೆ. ಶ್ರೀನಿವಾಸಗೌಡರು ಕಾರ್ಯಕ್ರಮಕ್ಕೆ ಬಂದಿದ್ರು. ಆದರೆ, ತನಗೂ ಕಾರ್ಯಕ್ರಮಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ರು.
ಹೈಕಮಾಂಡ್ ಇಷ್ಟೆಲ್ಲಾ ಪ್ರಯತ್ನ ಪಟ್ಟರೂ ಕೂಡಾ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಭಿನ್ನಾಭಿಪ್ರಾಯಗಳು ಮಾತ್ರ ಶಮನವಾಗುವ ಲಕ್ಷಗಣಗಳು ಗೋಚರವಾಗುತ್ತಿಲ್ಲ. ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ. ಅಲ್ಲದೆ ಭಿನ್ನಮತೀಯರೆಲ್ಲಾ ಕುಮಾರಸ್ವಾಮಿ ವಿರೋಧಿಗಳು, ಕುಮಾರಸ್ವಾಮಿಯನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ ಜೊತೆ ಶಾಮೀಲಾಗಿ ಮಾಡುತ್ತಿರುವ ಕೃತ್ಯ ಎನ್ನಲಾಗುತ್ತಿದೆ.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗೆ ಭಿನ್ನಮತೀಯರ ಮನವೊಲಿಸುವುದೇ ದೊಡ್ಡ ಕೆಲಸವಾಗಿದ್ದು, ಅಂತಿಮ ಹಂತದ ಕಸರತ್ತು ಮುಗಿದಿದೆ. ಆದರೂ ಭಿನ್ನಮತ ಶಮನವಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನು ಅನ್ನೋದೆ ಸದ್ಯದ ಕುತೂಹಲ.