ಕಾಂಗ್ರೆಸ್ ಮುಖಂಡ ಕೆ ಹೆಚ್ ಮುನಿಯಪ್ಪ ಕೋಲಾರ : ಕೋಲಾರದಲ್ಲಿ ಭಾಷಣ ಮಾಡಿದ್ದಕ್ಕೆ ನಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಿದ್ರು. ಹೀಗಾಗಿ ಕೋಲಾರಕ್ಕೆ ರಾಹುಲ್ ಗಾಂಧಿಯನ್ನು ಕರೆಸಿ ಬೃಹತ್ ಕಾರ್ಯಕ್ರಮ ಮಾಡುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಕೆ ಹೆಚ್ ಮುನಿಯಪ್ಪ ಅವರು ತಿಳಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಏಪ್ರಿಲ್ 5 ರಂದು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಜನರನ್ನು ಸೇರಿಸಿ ಸಮಾವೇಶ ಮಾಡಲಾಗುತ್ತದೆ. ದೇಶದಲ್ಲಿ ಬಿಜೆಪಿ ಹಾಗೂ ಪ್ರಧಾನಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಬಿಜೆಪಿ ಪಕ್ಷ ವಾಕ್ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದಾರೆ ಎಂದರು.
ಬಿಜೆಪಿಯು ಹಿಂದೂ ಮುಸ್ಲಿಂ ನಡುವೆ ಕೋಮುವಾದ ಅಲೆ ಎಬ್ಬಿಸುತ್ತಿದೆ- ಕೆ ಹೆಚ್ ಮುನಿಯಪ್ಪ.. ಕೋರ್ಟ್ ತೀರ್ಮಾನದ ವಿಚಾರವನ್ನು ನಾನು ಚರ್ಚೆ ಮಾಡಲ್ಲ. ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಹಾಗೂ ಓರ್ವ ರಾಷ್ಟ್ರದ ನಾಯಕ. ಸ್ಪೀಕರ್ ಗೆ ಕೋರ್ಟ್ ಆದೇಶದ ಪ್ರತಿ ಸಿಗೋದಕ್ಕೂ ಮುನ್ನ ಅನರ್ಹ ಮಾಡಿದ್ದಾರೆ. ವಯನಾಡ್ನಲ್ಲಿ ಉಪ ಚುನಾವಣೆ ಸಹ ಮಾಡಬೇಕು ಅಂತ ತೀರ್ಮಾನಿಸಿರುವ ಬಿಜೆಪಿ ಮನಸ್ಥಿತಿ ಎಂತಹದ್ದು. ಭಾರತ್ ಜೋಡೋ ಪಾದಯಾತ್ರೆ ಮೂಲಕ ರಾಹುಲ್ ಗಾಂಧಿ ದೇಶದ ಗಮನ ಸೆಳೆದಿದ್ದಾರೆ. ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದ ಅಡಿಯಲ್ಲಿ ಎಲ್ಲರಿಗೂ ಸಮಾನ ಹಕ್ಕಿದೆ. ಬಿಜೆಪಿಯು ಹಿಂದೂ ಮುಸ್ಲಿಂ ನಡುವೆ ಕೋಮುವಾದದ ಅಲೆ ಎಬ್ಬಿಸುತ್ತಿದೆ. ಸ್ವಾತಂತ್ರ್ಯ ತಂದುಕೊಟ್ಟವರಲ್ಲಿ ಎಲ್ಲಾ ಧರ್ಮದವರು ಇದ್ದಾರೆ ಎಂದು ಬಿಜೆಪಿಯವರು ಅರಿತುಕೊಳ್ಳಬೇಕು ಎಂದರು.
ರಾಹುಲ್ ಗಾಂಧಿ ಕೋಲಾರಕ್ಕೆ ಬರ್ತಿದ್ದಾರೆ: ಭಾರತ್ ಜೋಡೋ ವೇಳೆ ಜನಸಮೂಹ ನೋಡಿ ಬಿಜೆಪಿ ನಮ್ಮನ್ನು ಮುಗಿಸಲು ಹೊರಟಿದೆ. ವಿರೋಧ ಪಕ್ಷವನ್ನು ಯಾವ ರೀತಿ ನಡೆಸಿಕೊಳ್ಳಬೇಕು ಎನ್ನುವ ಮೌಲ್ಯ ಬಿಜೆಪಿಗೆ ಗೊತ್ತಿಲ್ಲ. ಹೀಗಾಗಿ ಏಪ್ರಿಲ್ 5 ರಂದು ರಾಹುಲ್ ಗಾಂಧಿ ಕೋಲಾರಕ್ಕೆ ಬರ್ತಿದ್ದಾರೆ. ನನ್ನ ಪರವಾಗಿ 2019ರಲ್ಲಿ ರಾಹುಲ್ ಗಾಂಧಿ ಪ್ರಚಾರ ಮಾಡಿದ್ರು. ಭಾಷಣದಲ್ಲಿ ಮೋದಿಗೆ ಅಪಮಾನ ಮಾಡಿದ್ದಾರೆ ಎಂದು ಕೆಲವರು ಕೋರ್ಟ್ಗೆ ಹೋದ್ರು. ಒಂದೇ ತಿಂಗಳಲ್ಲಿ ಕೋರ್ಟ್ನಲ್ಲಿ ತೀರ್ಮಾನ ಕೊಡಿಸುತ್ತಾರೆ. ಎರಡು ವರ್ಷ ಜೈಲು ಎಂದು ತೀರ್ಪು ಆಗುತ್ತೆ. ಅನರ್ಹ ಮಾಡೋದಕ್ಕೆ ಆಗೋದಿಲ್ಲ ಎಂದು ತಿಳಿದು 2 ವರ್ಷ ಜೈಲು ಎಂದು ತೀರ್ಮಾನ ಮಾಡ್ತಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ :ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. 2024 ರಲ್ಲಿ ಕಾಂಗ್ರೆಸ್ ಮಿತ್ರ ಪಕ್ಷಗಳೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದ್ದೇವೆ. ಬಿಜೆಪಿ ಅವರ ಗುಂಡಿಯನ್ನು ಅವರೇ ತೋಡಿಕೊಂಡಿದ್ದಾರೆ. ಕಮ್ಯುನಿಸ್ಟ್ ಪಕ್ಷ, ಟಿಎಂಸಿಯ ಮಮತಾ ಬ್ಯಾನರ್ಜಿ ಸೇರಿ ಎಲ್ಲರೂ ಬಿಜೆಪಿ ನಡೆಯ ವಿರುದ್ಧ ಖಂಡಿಸಿದ್ದಾರೆ ಎಂದು ಮುನಿಯಪ್ಪ ಹೇಳಿದರು.
ಕೋಲಾರದಲ್ಲಿ ಮೊದಲ ಸಭೆ ಆಗುತ್ತಿದೆ: ಕಾಂಗ್ರೆಸ್ಗೆ ಭಾಷಣ ಮಾಡೋದಕ್ಕೂ ಸಿಗಬಾರದು ಎಂದು ಬಿಜೆಪಿ ಈ ಕೆಲಸ ಮಾಡಿದೆ. ಪ್ರಧಾನಿ ಜೊತೆ ಕುಳಿತು ಅದಾನಿ ಮಾತನಾಡಿರುವ ಫೋಟೋ ದಾಖಲೆ ಸಮೇತ ರಾಹುಲ್ ಗಾಂಧಿ ತೋರಿಸಿದ್ರು. ಹೀಗಾಗಿ ಬಿಜೆಪಿ ಅವರು ರಾಹುಲ್ ಗಾಂಧಿಯನ್ನು ಅನರ್ಹ ಮಾಡಿದ್ದಾರೆ. ರಾಹುಲ್ ಗಾಂಧಿ ಅನರ್ಹ ಆದ ಬಳಿಕ ಕೋಲಾರದಲ್ಲಿ ಮೊದಲ ಸಭೆ ಆಗ್ತಿದೆ. ಕೋಲಾರದಲ್ಲಿ ಈ ವಿವಾದ ಶುರು ಆಗಿರೋದ್ರಿಂದ, ಕೋಲಾರದಿಂದಲೇ ಆರಂಭ ಮಾಡಲು ತೀರ್ಮಾನ ಮಾಡಿದ್ದಾರೆ. ರಾಹುಲ್ ಗಾಂಧಿ ಹಾಗೂ ಖರ್ಗೆ ಇಬ್ಬರು ಸೇರಿ ತೀರ್ಮಾನ ಮಾಡಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಸಮಾವೇಶ ಮಾಡುತ್ತಿದ್ದೇವೆ. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಗ್ರಾಮಾಂತರ ಜಿಲ್ಲೆಯವರು ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದರು. ಮುನಿಯಪ್ಪ ಜೊತೆಗೆ ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.
ಇದನ್ನೂ ಓದಿ :ಏಪ್ರಿಲ್ 5ರಂದು ಕರ್ನಾಟಕಕ್ಕೆ ಬರಲಿದ್ದಾರೆ ರಾಹುಲ್ ಗಾಂಧಿ