ಕೋಲಾರ:ಬಿಜೆಪಿ ಶಾಸಕ ಹಾಗು ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಸಂತ್ರಸ್ತೆ ಅಜ್ಞಾತ ಸ್ಥಳದಿಂದ ರಕ್ಷಣೆ ಕೋರಿದ್ದು, ಅವರ ನೆರವಿಗೆ ನಾವಿದ್ದೇವೆ ಎಂದು ನಗರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಪ ಅಜ್ಞಾತ ಸ್ಥಳದಿಂದ ರಕ್ಷಣೆ ಕೋರಿ ಯುವತಿ ಮನವಿ ಮಾಡಿದ್ದಾಳೆ. ಸಾರ್ವಜನಿಕ ಜೀವನದಲ್ಲಿರುವ ನಾವು ಆಕೆ ಹಾಗೂ ಆಕೆಯ ಕುಟುಂಬಕ್ಕೆ ರಕ್ಷಣೆ ನೀಡುವುದು ನಮ್ಮ ಕರ್ತವ್ಯ ಎಂದರು.
ಈಗಾಗಲೇ ವಿಧಾನಸಭೆಯಲ್ಲಿ ಸಂತ್ರಸ್ತೆಯ ರಕ್ಷಣೆ ಕುರಿತು ಮಾತನಾಡಿದ್ದು, ಖಂಡಿತ ಆಕೆಗೆ ರಕ್ಷಣೆ ಒದಗಿಸುತ್ತೇವೆ. ಇನ್ನು ಆಕೆ ಹೆದರಬೇಕಾಗಿಲ್ಲ, ನಮ್ಮದೇನು ಅನಾಗರಿಕ ಸಮಾಜವಲ್ಲ, ಒಂದು ಹೆಣ್ಣು ಮಗಳು ಸಂಕಷ್ಟದಲ್ಲಿದ್ದು ಸಹಾಯ ಕೇಳಿದ್ದಾಳೆ. ಆಕೆಯ ನೆರವಿಗೆ ನಾವು ನಿಲ್ಲುತ್ತೇವೆ ಎಂದರು.