ಕೋಲಾರ: ಕೆಜಿಎಫ್ನಲ್ಲಿರುವ ಎಸ್ಪಿ ಕಚೇರಿ ಸ್ಥಳಾಂತರವನ್ನು ವಿರೋಧಿಸಿ ಪ್ರಗತಿಪರ, ದಲಿತಪರ ಸಂಘಟನೆಗಳ ಕಾರ್ಯಕರ್ತರು ಅ.25 ರಂದು ಕೆಜಿಎಫ್ ಬಂದ್ಗೆ ಕರೆ ನೀಡಿದ್ದಾರೆ.
ಬ್ರಿಟಿಷರ ಕಾಲದಲ್ಲಿ ಪ್ರಾರಂಭವಾಗಿದ್ದ ಎಸ್ಪಿ ಕಚೇರಿಯನ್ನು ಸ್ಥಳಾಂತರ ಮಾಡುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಬಂದ್ಗೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸೇರಿದಂತೆ ಸಾರ್ವಜನಿಕರು, ಅಂಗಡಿ ಮಾಲೀಕರು ಸಹ ಬಂದ್ಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ಕಳೆದ 130 ವರ್ಷಗಳ ಹಿಂದೆ ಕೆಜಿಎಫ್ನಲ್ಲಿ ಗಣಿಗಾರಿಕೆ ಆರಂಭವಾದ ಸಮಯದಲ್ಲಿ ಆಳ್ವಿಕೆ ನಡೆಸುತ್ತಿದ್ದ ಬ್ರಿಟಿಷರು, ತಮ್ಮ ಸುರಕ್ಷತೆಗಾಗಿ ಹಾಗೂ ಗಣಿಗಳಲ್ಲಿನ ಕಳ್ಳತನ ತಡೆಯಲು ರಾಜ್ಯದಲ್ಲೇ ಮೊದಲ ಬಾರಿಗೆ ಇಲ್ಲಿ ವಿಶೇಷ ಪೊಲೀಸ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಈ ಮೂಲಕ ದೀರ್ಘಕಾಲದ ಇತಿಹಾಸವನ್ನು ಕೆಜಿಎಫ್ ಹೊಂದಿದೆ.
ರಾಜ್ಯದಲ್ಲಿ 31 ನೇ ಜಿಲ್ಲೆಯಾಗಿ ವಿಜಯನಗರ ಜಾರಿಗೆ ಬಂದಿದ್ದು, ಹೊಸದಾಗಿ ಹುದ್ದೆಗಳನ್ನು ಸೃಷ್ಟಿಸುವ ಬದಲು ಕೆಜಿಎಫ್ ಎಸ್ಪಿ ಕಚೇರಿ ಸಿಬ್ಬಂದಿಯನ್ನು ಸ್ಥಳಾಂತರ ಮಾಡಲು ಆರ್ಥಿಕ ಇಲಾಖೆ ಕಳೆದ ಆಗಸ್ಟ್ 19 ರಂದು ಆದೇಶ ಹೊರಡಿಸಿದೆ. ಇದರಿಂದ ಕೆಜಿಎಫ್ನಲ್ಲೂ ಕೈಗಾರಿಕಾ ವಲಯ ಸೇರಿದಂತೆ ಗಡಿ ಭಾಗದ ರಕ್ಷಣೆ ದೃಷ್ಟಿಯಿಂದ ಎಸ್ಪಿ ಕಚೇರಿಯ ಸ್ಥಳಾಂತರ ವಿಚಾರ ಕೈ ಬಿಡಬೇಕೆಂದು ಒತ್ತಾಯಿಸಿ ಅ.25 ರಂದು ಕೆಜಿಎಫ್ ಬಂದ್ಗೆ ಕರೆ ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯದ ಮೊದಲ ಪೊಲೀಸ್ ಜಿಲ್ಲೆಯ ಸ್ಥಳಾಂತರಕ್ಕೆ ಸಿದ್ಧತೆ: ಕೆಜಿಎಫ್ ಭಾಗದಲ್ಲಿ ವಿರೋಧ