ಕೋಲಾರ: ಹೂತಿಟ್ಟ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಇಲ್ಲಿನ ಬಂಗಾರಪೇಟೆ ತಾಲೂಕಿನ ಭಾವರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸುಮಾರು 30 ವರ್ಷದ ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಿ ಶವವನ್ನು ಹೂತಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಶವದ ಕಾಲಿನ ಬೆರಳುಗಳು ಹೊರಗೆ ಕಾಣಿಸಿಕೊಂಡ ಪರಿಣಾಮ ಶವ ಹೂತಿರುವುದು ಬೆಳಕಿಗೆ ಬಂದಿದೆ.
ಹೂತಿಟ್ಟ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ: ಕೊಲೆ ಶಂಕೆ ಪಂಚಾಯಿತಿ ವತಿಯಿಂದ ಸರ್ಕಾರಿ ಜಾಗದಲ್ಲಿ ಬಾವರಹಳ್ಳಿ ಗ್ರಾಮದ ಬಳಿ ಗಿಡಗಳನ್ನು ನೆಡುವ ಸಲುವಾಗಿ ಗುಂಡಿಯನ್ನು ತೆಗೆಯಲಾಗಿದೆ. ಈ ಗುಂಡಿಯಲ್ಲಿ ಶವವನ್ನ ಹಾಕಿ ಮಣ್ಣು ಮುಚ್ಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹೂತಿಟ್ಟ ಜಾಗದಲ್ಲಿ ಕಾಲು ಬೆರಳುಗಳನ್ನು ಕಂಡು ದನ ಮೇಯಿಸುವವರು ಗ್ರಾಮದ ಹಿರಿಯರಿಗೆ ವಿಷಯ ಮುಟ್ಟಿಸಿದ್ದು, ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ಪರಿಶೀಲನೆ ನಡೆಸಿ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಮೃತನ ಬಾಯಿಗೆ ಬಟ್ಟೆ ತುರಿಕಿದ್ದು, ಕತ್ತಿನಲ್ಲಿ ಹಗ್ಗ ಇರುವ ಪರಿಣಾಮ ಬೇರೆಡೆ ನೇಣು ಬಿಗಿದು ಕೊಲೆ ಮಾಡಿದ್ದು, ನಂತರ ಶವವನ್ನು ತಂದು ಹೂತಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.
ಈ ಸಂಬಂಧ ಬಂಗಾರಪೇಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.