ಕೋಲಾರ: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ವಿವಿಧ ಸಂಘಟನೆಗಳು ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಜನ ಜಾಗೃತಿ ರ‍್ಯಾಲಿ ಹಾಗೂ ಬಹಿರಂಗ ಸಭೆ ವೇಳೆ ನಡೆದ ಲಾಠಿ ಚಾರ್ಜ್ ವಿಚಾರಕ್ಕೆ ಸಂಬಂಧಿಸಿದಂತೆ ಮೂರು ಎಫ್ಐಆರ್ ದಾಖಲಾಗಿವೆ.
ಜನ ಜಾಗೃತಿ ರ‍್ಯಾಲಿ ಹಾಗೂ ಬಹಿರಂಗ ಸಭೆ ವೇಳೆ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದ ನಿಷೇಧಿತ ಪ್ರದೇಶವಾದ ಟವರ್ ರಸ್ತೆ ಮೂಲಕ ಮೆರವಣಿಗೆಗೆ ಅನುಮತಿ ನೀಡುವಂತೆ ಒತ್ತಾಯಿಸಿದರು. ಮೆರವಣಿಗೆಗೆ ಅನುಮತಿ ಇಲ್ಲದ ಕಾರಣ ಪೊಲೀಸರು ನಿರಾಕರಿಸಿದ್ದು, ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ಮಾಡಲಾಗಿತ್ತು.
ಜೊತೆಗೆ ಮೆರವಣಿಗೆ ಬರುವುದನ್ನ ಮನಗಂಡ ಟವರ್ ರಸ್ತೆ ಭಾಗದಲ್ಲಿನ ನಿವಾಸಿಗಳು ಗುಂಪು ಸೇರಿದ್ದರು. ಅಲ್ಲದೆ ಮೆರವಣಿಗೆಗೆ ಅಡ್ಡಿಪಡಿಸುವ ಸಲುವಾಗಿ ಕಾರ್ಯಕ್ರಮದ ಹಿಂದಿನ ರಾತ್ರಿ ರೈಲ್ವೆ ಹಳಿಯಲ್ಲಿ ಕಲ್ಲುಗಳನ್ನ ಸಂಗ್ರಹಿಸಿಟ್ಟಿದ್ದರು ಎನ್ನಲಾಗ್ತಿದೆ.
ಇನ್ನು, ಜಾಥಾಗೆ ಅನುಮತಿ ನೀಡದಿದ್ದರೂ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಕೋಲಾರ ನಗರ ಠಾಣೆಯಲ್ಲಿ ಭಾರತೀಯ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ತಿಮ್ಮರಾಯಪ್ಪ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನು ಕ್ಲಾಕ್ ಟವರ್ನಲ್ಲಿ ಅಪ್ರಚೋದಿತವಾಗಿ ಗುಂಪು ಸೇರಿ ಘೋಷಣೆ ಕೂಗಿದ ಹಿನ್ನೆಲೆ ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ಜೊತೆಗೆ ಕಾರ್ಯಕ್ರಮದ ಹಿಂದಿನ ರಾತ್ರಿ ರೈಲ್ವೆ ಹಳಿಯಲ್ಲಿ ಜಲ್ಲಿಕಲ್ಲು ಸಂಗ್ರಹಿಸಿದ್ದ ಓರ್ವನ ವಿರುದ್ಧ ಪ್ರಕರಣ ದಾಖಲಾಗಿದ್ದು, ಒಟ್ಟು ಮೂರು ಎಫ್ಐಆರ್ ದಾಖಲಾಗಿವೆ.
ಘಟನೆ ಬಳಿಕ ಕೋಲಾರ ನಗರ ಬೂದಿ ಮುಚ್ಚಿದ ಕೆಂಡದಂತಾಗಿರುವ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.