ಕೋಲಾರ:ಜಿಲ್ಲೆಯಲ್ಲಿ ಮೂರು ದಿನ ಕಠಿಣ ಲಾಕ್ಡೌನ್ ನಿಯಮ ಜಾರಿಗೊಳಿಸುವುದಾಗಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ತಿಳಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇ 21, 2021 ಸಂಜೆ 6.00 ಗಂಟೆಯಿಂದ ಮೇ 25, 2021 ಬೆಳಗ್ಗೆ 6.00 ಗಂಟೆ ವರೆಗೆ ಜಿಲ್ಲೆಯಲ್ಲಿ ಲಾಕ್ಡೌನ್ ನಿಯಮಗಳು ಕಠಿಣಗೊಳಿಸಲಾಗಿದ್ದು, ಪೆಟ್ರೋಲ್, ಹಾಲು, ವೈದ್ಯಕೀಯ ಸೇವೆ ಹೊರತುಪಡಿಸಿ ಉಳಿದ ಎಲ್ಲ ವಾಣಿಜ್ಯ ವ್ಯವಹಾರಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಲಾಕ್ಡೌನ್ ನಿಯಮಗಳು ಜಾರಿಯಲ್ಲಿದ್ದರೂ ಬೆಳಗ್ಗೆ 6.00 ರಿಂದ ಸಂಜೆ 6.00 ಗಂಟೆ ವರೆಗೆ ಜನಸಂದಣಿ ಸೇರಿರುವ ಹಲವಾರು ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆ ಕೋವಿಡ್ ಚೈನ್ ಮುರಿಯುವ ಉದ್ದೇಶದಿಂದ ಜಿಲ್ಲಾಡಳಿತವು ಲಾಕ್ಡೌನ್ ನಿಯಮಗಳನ್ನು ಇನ್ನೂ ಕಠಿಣಗೊಳಿಸಲು ಮುಂದಾಗಿದೆ ಎಂದರು.
ಅಂಗಡಿಗಳಲ್ಲಿ ದಿನಸಿ, ತರಕಾರಿ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಮಾರಾಟಕ್ಕೆ ಈಗ ಬೆಳಗ್ಗೆ 6.00 ರಿಂದ 10.00 ಗಂಟೆ ವರೆಗೆ ಅವಕಾಶವಿತ್ತು. ಅದನ್ನು ಮೂರು ದಿನಗಳ ಕಾಲ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಾಳೆ ಸಂಜೆವರೆಗೂ ತಮಗೆ ಅಗತ್ಯವಿರುವ ವಸ್ತುಗಳ ಖರೀದಿಯನ್ನು ಮಾಡಿ ಇಟ್ಟುಕೊಳ್ಳುವಂತೆ ಜಿಲ್ಲೆಯ ಜನತೆಗೆ ಜಿಲ್ಲಾಧಿಕಾರಿ ಮುನ್ನೆಚ್ಚರಿಕೆ ನೀಡಿದ್ದಾರೆ.
ಹೋಟೆಲ್ನಿಂದ ಆಹಾರ ಪಾರ್ಸೆಲ್ ತರುವುದು ಈಗ ಜಾರಿ ಇರುವಂತೆ ಮುಂದುವರೆಯಲಿದೆ ಎಂದ ಅವರು, ತಳ್ಳುವ ಗಾಡಿಗಳಲ್ಲಿ ತರಕಾರಿ ಮಾರಾಟಕ್ಕೆ ಸಂಜೆ 6.00 ಗಂಟೆ ವರೆಗೆ ಅವಕಾಶ ನೀಡಲಾಗಿದೆ. ಬ್ಯಾಂಕಿಂಗ್ ಕಚೇರಿಗಳೂ ಈ ಮೂರು ದಿನ ಮುಚ್ಚಿರುತ್ತವೆ. ಆದರೆ, ಎಟಿಎಂ ವ್ಯವಸ್ಥೆ ಲಭ್ಯವಿರಲಿದೆ. ಸರ್ಕಾರಿ ಕಚೇರಿಗಳು ಈಗಾಗಲೇ ಜಾರಿ ಇರುವ ನಿಯಮದಂತೆ ಕಾರ್ಯ ಮುಂದುವರೆಸಲಿವೆ ಎಂದರು.
ಇನ್ನು ಗ್ರಾಮಗಳಲ್ಲಿ ಹೋಂ ಐಸೋಲೇಷನ್ ನಿಯಮ ಉಲ್ಲಂಘಿಸಿದ ಬಗ್ಗೆ ದೂರುಗಳಿದ್ದು ಪಂಚಾಯಿತಿ ಮಟ್ಟದಲ್ಲಿಯೇ ಕೋವಿಡ್ ಕೇರ್ ಸೆಂಟರ್ ಮಾಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು. ಅಲ್ಲದೇ ಗ್ರಾಮಗಳಲ್ಲಿ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರಿಗೂ ಚಿಕಿತ್ಸೆ ಮತ್ತು ಮಾತ್ರೆಗಳನ್ನು ನೀಡಲಾಗುತ್ತದೆ ಎಂದರು.